About the Author

ಕವಿ, ವಿಮರ್ಶಕ, ಸಂಶೋಧಕ ಸಾ.ಶಿ. ಮರುಳಯ್ಯ ಅವರು ಜನಿಸಿದ್ದು 1931 ಜನವರಿ 28ರಮದು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಸಾಸಲು ಗ್ರಾಮದವರು. ತಾಯಿ ಸಿದ್ದಮ್ಮ, ತಂದೆ ಶಿವರುದ್ರಯ್ಯ. ಪ್ರಾಥಮಿಕ ಶಿಕ್ಷಣ ಪಡೆದದ್ದು ಚಿತ್ರದುರ್ಗದಲ್ಲಿ. 

ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ವಿಷಯ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದರು. ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.

ಶಿವತಾಂಡವ, ವಿಪರ್ಯಾಸ, ಘೋಷವತಿ, ರೂಪಸಿ, ಚೈತ್ರ- ಜ್ಯೋತಿ, ಬೃಂದಾವನ ಲೀಲೆ, ನನ್ನ ಕವನಗಳು(ಕವನ ಸಂಕಲನಗಳು), ಹೇಮಕೂಟ, ಪುರುಷ ಸಿಂಹ (ಕಾದಂಬರಿಗಳು), ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ, ಹರಿಹರನ ಹತ್ತು ರಗಳೆಗಳು, ಮರುಳಸಿದ್ದೇಶ್ವರ ವಚನವೈಭವ, ಅಗ್ರ ತಾಂಬೂಲ (ಸಂಪಾದಿತ ಕೃತಿಗಳು) ಇವರ ಪ್ರಮುಖ ಕೃತಿಗಳು. 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಇವರು ಕೆಲಕಾಲ ರಾಜ್ಯ ಭಾಷಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

ಸಾ.ಶಿ. ಮರುಳಯ್ಯ

(28 Jan 1931-05 Feb 2016)