About the Author

ಶಿವರಾಂ ಪೈಲೂರು ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ಕೃಷಿ ಕುಟುಂಬದವರಾದ ಇವರು ಪತ್ರಿಕೋದ್ಯಮದಲ್ಲಿ ಎಂ.ಎ, ಮತ್ತು ಕೃಷಿ ಸಂವಹನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

೧೯೮೮ ರಲ್ಲಿ ಮಣಿಪಾಲದ ’ತರಂಗ’ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, ಬಳಿಕ ಕೊಚ್ಚಿನ್ ನ ಸಂಬಾರ ಮಂಡಳಿಯಲ್ಲಿ ಉದ್ಯೋಗವನ್ನು ಕೈಗೊಂಡರು. ಸ್ಪೈಸ್ ಇಂಡಿಯಾ ಕನ್ನಡ ಮಾಸಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು.

೧೯೯೧ ರಲ್ಲಿ ಕೇಂದ್ರ ಸರ್ಕಾರದ ಭಾರತೀಯ ಸಮಾಚಾರ ಸೇವೆಗೆ ಸೇರ್ಪಡೆಯಾದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆಕಾಶವಾಣಿ, ದೂರದರ್ಶನ ವಿವಿಧ ಹುದ್ದೆಗಳಲ್ಲಿ ಮಂಗಳೂರು, ಧಾರವಾಡ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಪರಿಸರ ವರದಿಗಾರಿಕೆ ಕುರಿತು ದಿ ನೆದರ್ಲೆಂಡ್ಸ್  ನಲ್ಲಿ ತರಬೇತಿ ಪಡೆದು, ರಾಷ್ಟ್ರಪತಿಯವರ ಚೈನಾ ಪ್ರವಾಸದ ವೆಳೆ ಮಾಧ್ಯಮ ತಂಡದಲ್ಲಿ ಭಾಗಿಯಾದ ಹೆಗ್ಗಳಿಕೆ ಇವರದು.

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಉಪನಿರ್ದೇಶಕ ಹಾಗೂ ಆರ್‍.ಎನ್.ಐ ಸಹಾಯಕ ರಿಜಿಸ್ಟ್ರಾರ್‍ ಹುದ್ದೆಯಿಂದ ೨೦೧೭ ರ ಡಿಸೆಂಬರ್  ನಲ್ಲಿ ಸ್ವಯಂ ನಿವೃತ್ತಿ ಪಡೆದರು.

ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಆಸಕ್ತಿಯ ವಿಷಯವಾಗಿದ್ದು, ಒಂದೂವರೆ ದಶಕ ಕಾಲ ಪುತ್ತೂರಿನ ’ಮಧು ಪ್ರಪಂಚ’ ತ್ರೈಮಾಸಿಕ ಗೌರವ ಪ್ರಧಾನ ಸಂಪಾದಕರಾಗಿದ್ದರು. ೨೦೦೦ ನೇ ಇಸವಿಯಲ್ಲಿ ಸಮಾನಾಸಕ್ತರೊಂದಿಗೆ ಧಾರವಾಡದಲ್ಲಿ ಕೃಷಿ ಮಾಧ್ಯಮ ಕೇಂದ್ರ(ಕಾಮ್) ಸ್ಥಾಪನೆ ಮಾಡಿದರು. ’ಅಡಿಕೆ ಪತ್ರಿಕೆ’ಯ ’ಕಂಡದ್ದು ಕಾಣದ್ದು’ ಅಂಕಣದ ಬರಹಗಳು ’ಊಟ ಭರ್ಜರಿ ಹೊಟ್ಟೆ ಖಾಲಿ’ ಶೀರ್ಷಿಕೆಯ ಪುಸ್ತಕವಾಗಿ ಪ್ರಕಟವಾಗಿದೆ. ಇತ್ತೀಚಿನ ಪುಸ್ತಕ ’ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಬರವಣಿಗೆಯ ಕೈಪಿಡಿ’ ಪ್ರಕಟವಾಗಿದೆ.

 

ಶಿವರಾಂ ಪೈಲೂರು