About the Author

ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್ ಅವರು ಕಲ್ಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕ (ಬಿ.ಎ.) ಮತ್ತು ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ.

ಶಹಾಪುರದ ಚರಬಸವೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಬಾಪುಗೌಡ ದರ್ಶನಾಪುರ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹವ್ಯಾಸಿ ಪತ್ರಕರ್ತ ಆಗಿದ್ದರು. ಸಂಜೆವಾಣಿ ಪತ್ರಿಕೆಯ ಶಹಾಪುರದ ವರದಿಗಾರರಾಗಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಪತ್ರಿಕಾ ವೃತ್ತಿಗೆ ಬಂದ ಅವರು ಉಷಾಕಿರಣ, ಪ್ರಜಾವಾಣಿ, ವಿಜಯವಾಣಿ ಪತ್ರಿಕೆಗಳಲ್ಲಿ  ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ’ಶರಣಮಾರ್ಗ’ ಪತ್ರಿಕೆಯ ಸಂಪಾದಕರಾಗಿದ್ದಾರೆ.

’ಒಂದು ಮುಂಜಾವು’, ’ಎಲೆಮರೆ’, ’ಅರಿವಿನ ಹಣತೆ’, ’ನಾಡೋಜ ಪಾಟೀಲ ಪುಟ್ಟಪ್ಪ’, ’ಮುಖಾಮುಖಿ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಶಿವರಂಜನ್ ಅವರು ಹೈದರಾಬಾದ್ ಕರ್ನಾಟಕ ಯುವ ಬರಹಗಾರರ ಬಳಗದ ಪ್ರಮುಖರಲ್ಲಿ ಒಬ್ಬರು.

ಶಿವರಂಜನ್ ಸತ್ಯಂಪೇಟೆ

(01 Apr 1973)