About the Author

ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ ಅವರು 1940 ಫೆಬ್ರುವರಿ 14 ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -ಪ್ರೌಢಶಿಕ್ಷಣ ಪಡೆದ ನಂತರ ಅವರು ಧಾರವಾಡದಲ್ಲಿ ಶಿಕ್ಷಣ ಮುಂದುವರಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಭಾಷಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕರಾಗಿ, ತದನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಪಡೆದರು. ಗ್ರಂಥ ಸಂಪಾದನೆ, ಕಥೆ, ಕವನ, ವಿಮರ್ಶೆ ಇವರ ಆಸಕ್ತಿ ವಲಯವಾಗಿತ್ತು. ಕೆಲಕಾಲ ದಲಿತ ದ್ವೈ ಮಾಸಿಕ ಪತ್ರಿಕೆ ಸಂಪಾದಕರಾಗಿದ್ದರು. . 

ಜಾನಪದ ವ್ಯಾಸಂಗ, ಜಾನಪದ ವಿಜ್ಞಾನ, ಜನಪದ ಕಥನ ಕವನಗಳು (ಜಾನಪದ); ಬಿಸಿಲಹೂ, ಬಿರುಗಾಳಿ, ಗಂಡ ಹೆಂಡತಿ ಜಗಳ ಗಂಧ ತೀಡಿದ್ದಾಂಗ, ಬೇವುಬೆಲ್ಲ, ಹುತ್ತಗಳು, ಚಿತ್ತಚಿತ್ತಾರ, ಬೆಂಕಿ  (ಕವನ ಸಂಕಲನಗಳು), ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ (ವಿಮರ್ಶೆ), ಜನಪದ ಕಿತ್ತೂರಿನ ವೀರ ಶಿರೋಮಣಿಗಳು (ವಿಮರ್ಶೆ); ಕನ್ನಡ ಪದಕೋಶ, ಬೆಳದಿಂಗಳು, ಮೂವತ್ತಾರು ಮುಖ  ಅರವತ್ಮುಂಮೂರು ಕವಿತೆಗಳು (ಸಂಪಾದನೆ) ಲಾಲಿಸಿ ಕೇಲ ನನ ಮಾತ (ಅಂಕಣ ಬರಹಗಳು) ಜಿಜ್ಞಾಸೆ (ವಿಮರ್ಶಾತ್ಮಕ ಲೇಖನಗಳು) ಕುವೆಂಪು-ಬೇಂದ್ರೆ (ವಿಮರ್ಶಾತ್ಮಕ ಲೇಖನಗಳು) -ಇವು ಪ್ರಮುಖ ಕೃತಿಗಳು. ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ, ಬೇವು-ಬೆಲ್ಲ-ಇವರ ಅಭಿನಂದನಾ ಗ್ರಂಥ. 

ಜಾನಪದ, ವಿಮರ್ಶೆ, ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದಂತೆ ಕನ್ನಡದ ಸಾವಿರ ಒಗಟುಗಳು, ಜನಪದ ಮಹಾಭಾರತ, ಹನುಮಂತನ ಲಿಂಗಧಾರಣ, ಚಿತ್ರಕೇತು, ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ, ಲಾವಣಿ ಗೀಗೀ ಮೇಳ, ಜಾನಪದ ಸಾಹಿತ್ಯ ದರ್ಶನ ಭಾಗ-13, 15, 16, 17, 18, 19, 24, 25, 26. ಆಯ್ದ ಜಾನಪದ ಒಗಟುಗಳು (ಸಂಪಾದನೆ), ಜಾನಪದ ವಿಜ್ಞಾನ, ನಮ್ಮ ಜಾನಪದ ಸಮೀಕ್ಷೆ, ಜಾನಪದ ಕಿತ್ತೂರಿನ ಕಿಡಿಗಳು, ಜಾನಪದ ವ್ಯಾಸಂಗ ಭಾಗ-1,ಜಾನಪದ ಅವಲೋಕನ, ಚಿಕ್ಕಮನೆಗೆ ಚಿನ್ನದ ಬೀಗ, ಹಂತಿ ಗೀತಿ ಲಾವಣಿ ಸಂಪ್ರದಾಯಗಳು (ವಿಮರ್ಶೆ), ಜಾನಪದ ಹಾಡುಗಳಲ್ಲಿ ನರಗುಂದ ಬಾಬಾಸಾಹೇಬ (ಪಿಎಚ್ ಡಿ ಪ್ರಬಂಧ) ಚಿತ್ರಸೇನ ಮತ್ತು ಲಕ್ಷ್ಮಿಣಿ ಕಲ್ಯಾಣಿ (ದೊಡ್ಡಾಟ. 

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಇವರ ಸಾಹಿತ್ಯ ಕೃಷಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಜಾನಪದ ತಜ್ಞ ಪ್ರಶಸ್ತಿ, ಅಮ್ಮಿನಭಾವಿ ಪ್ರಶಸ್ತಿ, ದೀಪಾರಾಧನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ , ಡಾ. ಜೀಶಂಪ ಜಾನಪದ ತಜ್ಞ ಪ್ರಶಸ್ತಿ, ಪಿಎಚ್ ಡಿ ಮಹಾಪ್ರಬಂಧಕ್ಕೆ ಸುವರ್ಣ ಪದಕ ಪ್ರಶಸ್ತಿ ಮುಂತಾದ ಗೌರವಗಳು ಲಭಿಸಿವೆ. 

ಸೋಮಶೇಖರ ಇಮ್ರಾಪುರ

(14 Feb 1940)

Awards