About the Author

ಎಂ.ಎನ್. ಸುಂದರರಾಜ್ ಅವರು ಲೇಖಕರಾಗಿ, ಅಂಕಣಕಾರರಾಗಿ ಪ್ರಸಿದ್ಧರು. ನಿವೃತ್ತ ಆಂಗ್ಲ ಉಪನ್ಯಾಸಕರಾದ ಅವರು ಕವನ, ನಾಟಕ, ಅಂಕಣ ಬರಹ, ಅನುವಾದ, ಸಂಪಾದನೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇದುವರೆಗೆ ಅವರ ಲೇಖನಿಯಿಂದ ಹದಿನೆಂಟು ಕೃತಿಗಳು ಹೊರಬಂದಿವೆ. ಕನ್ನಡಪ್ರಭದಲ್ಲಿ ಸತತ ಐದು ವರ್ಷಗಳ ಕಾಲ ಹಿರಿಯರ ಹಾದಿ ಎಂಬ ಅಂಕಣವನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆದಿದ್ದರು. ಅಲ್ಲದೇ ಆರು ವರ್ಷಗಳ ಕಾಲ ದೂರದರ್ಶನ ಚಂದನದಲ್ಲಿ ಇವರೇ ಪ್ರತಿದಿನ ನಡೆಸಿಕೊಟ್ಟ ‘ಹೆಜ್ಜೆ ಗುರುತು’ ಕಾರ್ಯಕ್ರಮ ದಾಖಲೆಯನ್ನು ಸೃಷ್ಟಿಸಿತ್ತು. ಹೈದರಾಬಾದಿನ `ಈನಾಡು’ ಪತ್ರಿಕೆಯ ಅಂಕಣಕಾರರೂ ಆಗಿ ಸೇವೆ ಸಲ್ಲಿಸಿರುವ ಸುಂದರ ರಾಜ್ ಇದುವರೆಗೆ ನಾಡಿನ ಹಲವಾರು ಪತ್ರಿಕೆಗಳಿಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಈಗಾಗಲೇ ಹಿರಿಯರ ಹಾದಿ ಆರು ಸಂಪುಟಗಳಲ್ಲಿ ಪ್ರಕಟವಾಗಿದೆ.

ಕುಂತ್ರೆ ನಿಂತ್ರೆ ಬೇಂದ್ರೆ, ಎಂ.ವಿ. (ಅಭಿನಂದನಾ ಗ್ರಂಥದ ಕನ್ನಡಾನುವಾದ), ಶಂಕರಾಚಾರ್ಯರು, ಮನೆ ಯಂಗಳದಿ ಬೆಳದಿಂಗಳು, ಭರವಸೆಯ ಬೆಳಕು, ಶಿವಮೊಗ್ಗ ಸಾಧಕರು, ಇವರು ನಮ್ಮವರು, ನಾವು ನಮ್ಮವರು, ಹುಡುಕಾಟ, ಬಾಸಿಂಗ, ಮಹರ್ಷಿದ್ವಯರು, ಮುಂತಾದ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಈ ಸಾಲಿಗೆ ಸೇರುವ ಮತ್ತೊಂದು ಕೃತಿ `ದಿವಾನ್ ಪೂರ್ಣಯ್ಯ’ ಅಂಕಿತ ಪ್ರಕಾಶನ ಪ್ರಕಟಿಸಿದೆ. ಡಾ. ಲಕ್ಷ್ಮೀನಾರಾಯಣ ಭಟ್ಟರ ಕುರಿತಾದ `ವಿಮರ್ಶೆಯ ಉಡುಗೊರೆ’ ಸಂಪಾದನ ಕಾರ್ಯವನ್ನೂ ಮಾಡಿದ್ದಾರೆ. ಅಲ್ಲದೆ ಸುಮಾರು ಇಪ್ಪತ್ತೈಕ್ಕೂ ಹೆಚ್ಚು ಅಭಿನಂದನಾ ಗ್ರಂಥಗಳಿಗೆ ಪ್ರಧಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗದಲ್ಲಿ ನೆಲೆಸಿರುವ ಅವರು ವಿದೇಶಗಳಿಗೂ ಸಂಚರಿಸಿ, ಭಾರತೀಯ ಸಂಸ್ಕೃತಿ ಪ್ರಸಾರಕ್ಕೆ ನೆರವಾಗಿದ್ದಾರೆ. ಇಂದಿಗೂ ಇವರ ಲೇಖನಗಳು ಮತ್ತು ಅಂಕಣಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಸುಂದರರಾಜ್ ಎಂ.ಎನ್.

BY THE AUTHOR