About the Author

ಲೇಖಕ ಟಿ.ಎಂ. ಸುಬ್ಬರಾಯರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಬಣ್ಣೂ ಮನೆ(ಬಾನುಮನೆ) ಗ್ರಾಮದ ತೆಂಕೋಡು ಮನೆಯಲ್ಲಿ. ತಂದೆ- ಟಿ.ವಿ. ಮಹಾಬಲಗಿರಿಯಪ್ಪ, ತಾಯಿ- ಫಣಿಯಮ್ಮ. ಪ್ರಾರಂಭಿಕ ಶಿಕ್ಷಣವನ್ನು ತುಮರಿ, ಹಿರೇ ಭಾಸ್ಕರದಲ್ಲಿ ಮತ್ತು ಪ್ರೌಢಶಾಲಾಭ್ಯಾಸವನ್ನು ಸಾಗರದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಆನಂತರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಿಂದ ಪದvವೀಧರರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಬೆಳಗಾವಿಯ ಸರಕಾರಿ ಶಿಕ್ಷಣ ಕಾಲೇಜಿನಿಂದ ವೃತ್ತಿ ಶಿಕ್ಷಣ ಪದವೀಧರರು. ಶಿರಸಿಯ ಆವೇ ಮರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಅಲ್ಲಿಯೇ . ನಿವೃತ್ತರಾದರು. 

ಸುಮಾರು ಆರುನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದು ಮಯೂರ, ಪ್ರಜಾವಾಣಿ, ತರಂಗ, ತುಷಾರ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿವೆ. ಕೆಲವು ಸಣ್ಣ ಕಥೆಗಳು ತೆಲುಗು, ಮಲಯಾಳಂ ಭಾಷೆಗಳಿಗೂ ಅನುವಾದಗೊಂಡಿವೆ. ಇವರು ಬರೆದ ಸಣ್ಣ ಕಥೆಗಳು ಸುಮಾರು ಆರು ಸಂಕಲನಗಳಾದ ಕೆರೆ, ಲಿಂಡಾ…ಬೆಲಿಂಡಾ, ಶಾಶ್ವತಿ ಮತ್ತು ಇತರ ಕಥೆಗಳು. ನೂರ ಇಪ್ಪತ್ತ್ಯೆದು ಕಥೆಗಳು, ಭಾಗ 1, ನೂರ ಇಪ್ಪತ್ತ್ಯೆದು ಕಥೆಗಳು, ಭಾಗ 2 ಮತ್ತು ಋತುಪರ್ಣ ಮತ್ತು ಇತರ ಕಥೆಗಳು ಸೇರಿವೆ. ಪತ್ರಿಕೋದ್ಯಮಿಯಾಗಿದ್ದರು. ಆದದ್ದು – ಆಗಬೇಕಾದ್ದು, ಉತ್ತರ ಕನ್ನಡ ಜಿಲ್ಲಾ ವಾರ್ತಾಪತ್ರ, ಶಿರಸಿ ತಾಲ್ಲೂಕು ವಾರ್ತಾಪತ್ರ, ಬಲ್ಲಿರೇನಯ್ಯಾ…, ಅನನ್ಯ = ಅನ್ಯೋನ್ಯ, ಮಹಿಳಾ ಸಾಧಕಿಯರು ಮುಂತಾದ ಅಂಕಣಗಳನ್ನು ನಿರ್ವಹಿಸಿದ್ದಾರೆ.

ಅನಾವರಣ, ಅರುಣರಾಗ, ಅದೃಷ್ಟ, ಅಂತರಾಳ, ಇಳಿಬಿಸಿಲು, ತೆರೆದಿಟ್ಟ ಬೆಳಕು, ಬೇರು ಬಿಳಲು, ಮಡೇ ಮನೆ, ಉತ್ತರಾ, ಹಿನ್ನೀರು -ಇತರೆ ಕಾದಂಬರಿಗಳು.  ಯಕ್ಷಗಾನದಲ್ಲಿ ಒಲವು ಬೆಳೆದು ಅಶೋಕ ಸುಂದರಿ, ಅಕ್ಷರ ಸಾಕ್ಷಾತ್ಕಾರ, ಕಾರ್ಗಿಲ್ ವಿಜಯ, ಮಧುಕೇಶ್ವರ ಮಹಾತ್ಮೆ, ಮಯೂರ ವಿಜಯ, ಮಯೂರ‍್ನ ಗೆಲ್ವು, ವೀರ ಋತು ದ್ವಜ, ಮಧುಕೇಶ್ವರ ವೈಭವಂ, ಸಾಕ್ಷರ ವಿಜಯ, ಕುಸುಮ ಕಾಮಿನಿ ಮುಂತಾದ 10ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. 35ಕ್ಕೂ ಹೆಚ್ಚು ಬಾನುಲಿ ನಾಟಕಗಳನ್ನು ರಚಿಸಿದ್ದಾರೆ. ಎರಡು ಬಾರಿ ಅಮೇರಿಕಾ ಪ್ರವಾಸ ಕೈಗೊಂಡ ಅವರು ‘ಡಲ್ಲಾಸ್ ಡೈರಿ’ ಹಾಗೂ ‘ಹ್ಯೂಸ್ಟನ್ ನಲ್ಲಿ ನಲವತ್ತು ದಿವಸಗಳು ಎಂಬ ಎರಡು ಪ್ರವಾಸಕಥನಗಳನ್ನು ರಚಿಸಿದ್ದಾರೆ. ಇವರ ಮತ್ತೆರಡು ಮಹತ್ತರ ಕೃತಿಗಳು ಸಮಜೋ ಸಾಂಸ್ಕೃತಿಕ ಅಧ್ಯಯನ ಸಂಶೋಧನೆಯ ‘ಹವ್ಯಕ ಜನಪ್ರತಿನಿಧಿಗಳು’, ಹಾಗೂ ಆತ್ಮ ಚರಿತ್ರೆ ‘ರಾಯ ಕೇಳೆಂದ’,  ಶಿರಸಿ, ಸಿದ್ಧಾಪುರಗಳಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಮತ್ತು ಶಿರಸಿಯಲ್ಲಿ ನಡೆದ 55ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ‍್ಯದರ್ಶಿಯಾಗಿ, ಮಾರಿಕಾಂಬ ದೇವಸ್ಥಾನದ ತ್ರಿಶತಮಾನೋತ್ಸವ ಮತ್ತು ಹವ್ಯಕ ಮಹಾ ಸಮ್ಮೇಳನದ ಸಂಯೋಜಕರಾಗಿದ್ದರು.

ಕೆ. ಶಾಮರಾವ್ ದತ್ತಿ ನಿಧಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ಅಖಿಲ ಭಾರತ ಹವ್ಯಕ ಮಹಾ ಸಭಾ ಬೆಂಗಳೂರು ಮತ್ತು ಹೊಸ ನಗರ ತಾಲ್ಲೂಕಿನ ನಿಟ್ಟೂರಿನ ಆದಿತ್ಯ ಲೋಕದಿಂದ ‘ಶ್ರೇಷ್ಠ ಸಾಹಿತ್ಯ ಸೇವಾ ಪುರಸ್ಕಾರ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ದೊರೆತಿವೆ.

ಟಿ.ಎಂ. ಸುಬ್ಬರಾಯ

(13 Jan 1945)