About the Author

ವೃತ್ತಿಯಿಂದ ವೈದ್ಯರಾದ ಟಿ.ಎನ್. ಕೃಷ್ಣರಾಜು ಪ್ರವೃತ್ತಿಯಿಂದ ಲೇಖಕರು. ಎನ್. ಕೃಷ್ಣರಾಜು ಅವರು ಹುಟ್ಟಿದ್ದು 1945ರಲ್ಲಿ ಕಡಲತೀರದ ಉಡುಪಿ ತಾಲೂಕಿನ ಕೊಡವೂರು ಗ್ರಾಮದಲ್ಲಿ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ  ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾಭ್ಯಾಸವನ್ನು ಮಾಡಿದ ಅವರು, ಯುವರಾಜ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು.  ಮುಂಬೈ ಯೂನಿವರ್ಸಿಟಿಯಲ್ಲಿ  ಡಿ.ಸಿ.ಎಚ್  ಮತ್ತು ಎಂ.ಡಿ. ಪೂರ್ತೀಕರಿಸಿದರು. ಅಲ್ಲದೆ 1972 ರಲ್ಲಿ ಅಮೆರಿಕಕ್ಕೆ ವ್ಯಾಸಂಗಕ್ಕಾಗಿ  ಹೋಗಿ, ಚಿಕಾಗೋ ನಗರದ ಕುಕ್ ಕೌಂಟಿ ಆಸ್ಪತ್ರೆ ಮತ್ತು ಇಲಿನಾಯ್ ವಿಶ್ವವಿದ್ಯಾಲದ ಆಸ್ಪತ್ರೆಗಳಲ್ಲಿ ನವಜಾತ ಶಿಶು ಶಾಸ್ತ್ರದ ಬಗ್ಗೆ ನಾಲ್ಕು ವರ್ಷ ತರಬೇತಿ ಪಡೆದರು. 

ಆನಂತರ, 1976 ರಲ್ಲಿ ಅದೇ ಸಂಸ್ಥೆಯಲ್ಲಿ ಕೆಲಸ ಆರಂಭಿಸಿ, 1991 ರಲ್ಲಿ ಪ್ರೊಫ಼ೆಸರ್ ಆದರು. ಇವರು 2002 ರಲ್ಲಿ ವಾಶಿಂಗ್ಟ್‍ನ್ ನಗರದ ಹತ್ತಿರದ ಜಗತ್ಪ್ರಸಿದ್ಧ ರಾಷ್ಟೀಯ ಆರೋಗ್ಯ ಸಂಸ್ಥೆಯಲ್ಲಿ (National Institutes of Health) ಮೆಡಿಕಲ್ ಆಫೀಸರ್ ಆಗಿ ಸೇರಿದರು. ಅಲ್ಲಿ, 2013ರಲ್ಲಿ ಒಂದು ಶಾಖೆಯ ಮುಖ್ಯಾಧಿಕಾರಿಯಾದರು. ಕೃಷ್ಣರಾಜು ಅವರು NIH ಶಾಖೆಯೊಂದರ ಮುಖ್ಯಸ್ಥರಾದವರಲ್ಲಿ ಮೊಟ್ಟಮೊದಲ ಭಾರತೀಯ ವಿಜ್ಞಾನಿ. ಐದು ವರ್ಷಗಳ ನಂತರ ನಿವೃತ್ತರಾಗಿ, ಈಗ ಮೆರಿಲ್ಯಾಂಡ ನಲ್ಲಿ ವಾಸವಾಗಿದ್ದಾರೆ. ನಿವೃತ್ತಿಯ ನಂತರ ಇವರು ನೇಚರ್/ಸ್ಪ್ರಿಂಗರ್ ಕಂಪನಿಯವರು ಪ್ರಕಟಿಸುವ ಮಾಸಿಕ ಪತ್ರಿಕೆಗೆ (Journal of Perinatology) ಉಪಸಂಪಾದಕರಾಗಿ ಕೆಲಸಮಾಡುತ್ತಿದ್ದಾರೆ.  

ಇವರ "ಶನಿ ಹಿಡಿದದ್ದು!" ಸಣ್ಣ ಕಥೆಯು 1966ರಲ್ಲಿ ಪ್ರಜಾವಾಣಿ ದ್ವೀಪಾವಳಿ ಕಥಾಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. "ಕಾಲ" ಮತ್ತು "ಮಾಡು ಸಿಕ್ಕದಲ್ಲಾ", ಪ್ರಜಾವಾಣಿ ದ್ವೀಪಾವಳಿ ಕಥಾಸ್ಪರ್ಧೆಗಳಲ್ಲಿ ತೀರ್ಪುಗಾರರ ಮಚ್ಚಿಗೆ ಪಡೆದ ಸಣ್ಣ ಕಥೆಗಳು (1968 ಮತ್ತು 1970) . "ಮಾಡು ಸಿಕ್ಕದಲ್ಲಾ" ಎಸ್. ದಿವಾಕರ ಸಂಪಾದಿಸಿದ "ಶತಮಾನದ ಸಣ್ಣ ಕಥೆಗಳು" ಸಂಕಲನದಲ್ಲಿ ಸೇರಿದೆ (1997). "ನಾಯಿಗಳು" ಕಥೆಯು, ಮನೋಹರ ಗ್ರಂಥಮಾಲೆ ಪ್ರಕಟಿಸಿದ "ಇನ್ನಷ್ಟು ಹೊಸಕಥೆಗಳು" ಸಂಕಲನದಲ್ಲಿ ಸೇರಿದೆ (1970) 

ಚಿಕಾಗೋದ "ಕನ್ನಡಕೂಟ" ವತಿಯಿಂದ ಹೊರಡಿಸಿದ ಕೈಬರಹದ ವಾರ್ಷಿಕ ಪತ್ರಿಕೆಗೆ "ಸಂಗಮ" ಎಂದು ಇವರೇ ನಾಮಕರಣ ಮಾಡಿದ್ದಲ್ಲದೇ, ಅದರ ಮೊದಲ ಸಂಪಾದಕರಾದರು. (1973) . "ಬೇತಾಳರಾಯ ಮತ್ತು ಇತರ ಕಥೆಗಳು" ಅದುವರೆಗೆ ಬರೆದ ಕಥೆಗಳ ಸಂಕಲನವನ್ನು ಸಾಕ್ಷಿ ಪ್ರಕಾಶನ ಹೊರತಂದಿದೆ (1980). "ಪಶ್ಚಿಮಾಯಣ" ಎಂಬ ಕಿರು ಕಾದಂಬರಿಯನ್ನು ಮನೋಹರ ಗ್ರಂಥಮಾಲೆ ಪ್ರಕಟಿಸಿದೆ(1981). 

"ಸಾವಿರ ಪಕ್ಷಿಗಳು" ಸಾಹಿತ್ಯದ ನೊಬೆಲ್ ಪಾರಿತೋಷಕ ಪಡೆದ ಎಸುನಾರಿ ಕವಬಾಟ ಬರೆದ ಥೌಸಂಡ ಕ್ರೇನ್ಸ್ ಕಾದಂಬರಿಯ ಅನುವಾದ (2009). 

"ಜಾತಕ ಫಲ" ಸಣ್ಣ ಕಥೆಯು ‘ದೇಶ ಕಾಲ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು (2007). 

"ಕಥೆಗಳು ಮತ್ತು ಕಾದಂಬರಿ" ಅದುವರೆಗೆ ಬರೆದ ಕಥೆಗಳ ಮತ್ತು ಕಿರುಕಾದಂಬರಿಯ ಸಂಗ್ರಹವಾಗಿದ್ದು,  ಭಾವನ ಪ್ರಕಾಶನವು ಈ ಸಂಕಲನವನ್ನು ಪ್ರಕಟಿಸಿದೆ (2011) . 

 

(

ಟಿ.ಎನ್. ಕೃಷ್ಣರಾಜು