About the Author

ಪತ್ರಿಕಾರಂಗದ ಭೀಷ್ಮರಾಗಿದ್ದ ತೀ. ತಾ. ಶರ್ಮಾ ಅವರ ಬರಹದಲ್ಲಿಯ ವಿಷಯ ವೈವಿಧ್ಯತೆ ವಿಶಿಷ್ಟವಾಗಿದೆ. ಅವರು 1897 ಏಪ್ರಿಲ್ 27 ಕೋಲಾರದಲ್ಲಿ ಜನಿಸಿದರು.  ಶಾಸನ, ಸಾಹಿತ್ಯ, ವಿಮರ್ಶೆ, ಇತಿಹಾಸ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ಹಸ್ತಪ್ರತಿ ಸಂಪಾದನೆ, ನೀಳ್ಗತೆ ಹೀಗೆ ವಿವಿಧ ಪ್ರಕಾರಗಳಿಗೆ ಸೇರಿದ ಸುಮಾರು ನಲ್ವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ‘ವಿಕ್ರಾಂತ ಭಾರತ’, ‘ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ’, ‘ವಿಚಾರ ಕರ್ನಾಟಕ’ ಕೃತಿಗಳ ಮೂಲಕ ಶರ್ಮರ ದೇಶಾಭಿಮಾನದ ಸುದೀರ್ಘ ಅರಿವು ಮೂಡುತ್ತದೆ.

ಇತಿಹಾಸ ಸಂಶೋಧನೆಯಲ್ಲಿ ‘ಜಗನ್ಮೋಹನ ಬಂಗಲೆಯಿಂದ ವಿದುರಾಶ್ವತ್ಥದವರೆಗೆ’, ‘ಚಾರಿತ್ರಿಕ ದಾಖಲೆಗಳು’, ‘ಇತಿಹಾಸದ ಸಂದರ್ಭಗಳು’, ಹಾಗೂ ‘ಮೈಸೂರು ಇತಿಹಾಸದ ಹಳೆಯ ಘಟಕಗಳು’ ಗ್ರಂಥಗಳು ಪ್ರತಿಬಿಂಬಿಸುತ್ತವೆ. ಶರ್ಮ ಅವರ ಶಾಸನ ವ್ಯಾಸಂಗವನ್ನು ಅವರ ‘ಶಿಲಾಶಾಸನಗಳಲ್ಲಿ ಕಂಡು ಬರುವ ಕನ್ನಡ ಕವಿಗಳು’, ‘ವಿಚಾರ ಕರ್ನಾಟಕ’ ಹಾಗೂ ‘ನಮ್ಮ ಜನ ನಡೆಸಿದ ಜೀವನ’ ಕೃತಿಗಳು ಮಾರ್ದನಿಸುತ್ತವೆ.

ಶರ್ಮ ಅವರ ಸಾಹಿತ್ಯಜ್ಞಾನವನ್ನು ‘ಕನ್ನಡ ಗದ್ಯದ ಕಥೆ’, ‘ಪ್ರಗತಿಶೀಲ ಸಾಹಿತ್ಯ’, ಪ್ರೆಮಫಲ’, ‘ಹೂಬುಟ್ಟಿ’ ಮುಂತಾದ ಸಂಕಲನಗಳು ನಿರೂಪಿಸಿದರೆ, ಅವರಲ್ಲಿದ್ದ ವಿಮರ್ಶನ ಸಾಮರ್ಥ್ಯವನ್ನು ಅವರ ‘ಮಾಸ್ತಿಯವರ ಮನೋಧರ್ಮ’ ಕೃತಿ ಚೆನ್ನಾಗಿ ನಿರೂಪಿಸುತ್ತದೆ. ‘ಶ್ರೀಕೃಷ್ಣ’, ‘ಅಶೋಕ ಚಕ್ರವರ್ತಿ’, ‘ಅಕ್ಬರ್’ ಮುಂತಾದ ಪೌರಾಣಿಕ – ಚಾರಿತ್ರಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನಷ್ಟೇ ಅಲ್ಲದೆ ‘ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ’ ಬಾಲ ಗಂಗಾಧರ ತಿಲಕ್’, ‘ಸರ್ದಾರ್ ವಲ್ಲಭಬಾಯಿ ಪಟೇಲ್’, ‘ಸುಭಾಷ್ ಚಂದ್ರಭೋಸ್’, ‘ಲಾಲಾ ಲಜಪತರಾಯ್’’, ‘ಇಂದಿರಾಗಾಂಧಿ’ ಮುಂತಾದ ರಾಷ್ಟ್ರನಾಯಕರ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ.

ಹಸ್ತಪ್ರತಿ ಸಂಪಾದನೆಯಲ್ಲಿ ವಿಶೇಷ ಆಸ್ಥೆ ಹೊಂದಿದ್ದ ಶರ್ಮರು ‘ರಾಮರಾಯನ ಬಖೈರು’, ‘ಹೈದರ್ ನಾಮೆ’, ‘ಕಂಠೀರವ ನರಸಿಂಹರಾಜ ವಿಜಯಿ’, ‘ಸಿರಿಭೂವಲಯ’ ಮುಂತಾದ ಹಸ್ತಪ್ರತಿಗಳ ಸಂಪಾದನೆಗೆ ಮುಂದಾದರು. ಉತ್ತಮ ಭಾಷಾಂತರಕಾರರೂ ಆಗಿದ್ದ ಶರ್ಮರು ಮೆನನ್ ಹಾಗೂ ನೆಹರೂ ಅವರ ಆಂಗ್ಲಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಉತ್ತಮ ವಾಗ್ಮಿಗಳಾಗಿದ್ದ ಶರ್ಮರು ಅನೇಕ ಭಾಷಣಗಳನ್ನು ಕೃತಿಗಳಾಗಿಸಿದ್ದು ‘ಪೀಟರ್ ಜಂಗ್’ ಅಂತಹ ಒಂದು ಉದಾಹರಣೆಯಾಗಿದೆ. ಶ್ರೇಷ್ಠ ಭಾಷಣ ತರ್ಜುಮೆದಾರರೂ ಆಗಿದ್ದು, ಗಾಂಧೀಜಿ, ನೆಹರೂ, ರಾಜಾಜಿ, ಸರೋಜಿನಿ ನಾಯ್ಡು ಮುಂತಾದ ರಾಷ್ಟ್ರನಾಯಕರ ತರ್ಜುಮೆ ಭಾಷಣಕಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು 1973 ಸೆಪ್ಟಂಬರ್‌ 1 ರಂದು ನಿಧನರಾದರು. 

ತೀ ತಾ. ಶರ್ಮಾ

(27 Apr 1897-01 Sep 1973)