About the Author

19ನೇ ಶತಮಾನದ ಕನ್ನಡದ ಪ್ರಥಮ ಲೇಖಕಿ, ಕಾದಂಬರಿಗಾರ್ತಿ, ಕವಯತ್ರಿ ತಿರುಮಲಾಂಬಾ ಎಂದರೆ ತಪ್ಪಾಗಲಾರದು. ಅವರು ಪೂರ್ಣ ಹೆಸರು ನಂಜನಗೂಡು ತಿರುಮಲಾಂಬ 1887 ಮಾರ್ಚ್ 15 ರಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನಿಸಿದರು. ಹತ್ತನೇ ವಯಸ್ಸಿಗೆ ವಿಧವೆಯಾದ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಆಚೀಚಿನ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದ ತಿರುಮಲಾಂಬ ಅವರ ಮನೆ ಕ್ರಮೇಣವಾಗಿ ಒಂದು ಪಾಠಶಾಲೆಯಾಗಿಯೇ ರೂಪುಗೊಂಡಿತು. ಮಕ್ಕಳು ಮಾತ್ರವಲ್ಲದೆ ನೆರೆಹೊರೆಯ ಮಹಿಳೆಯರೂ ತಮ್ಮ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ ತಮ್ಮ ಮಕ್ಕಳೊಂದಿಗೆ ತಾವೂ ಕಲಿಯತೊಡಗಿದರು. ಹೀಗೆ ಕ್ರಮೇಣದಲ್ಲಿ ಇದು "ಮಾತೃಮಂದಿರ" ಎಂಬ ಹೆಸರು ಪಡೆಯಿತು. ಈ ದಿನಗಳಲ್ಲಿ ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗಾಗಿ ತಿರುಮಲಾಂಬ ಅವರು "ಸನ್ಮಾರ್ಗದರ್ಶಿನಿ" ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.

ತಮ್ಮ ಅಧ್ಯಯನ ವೇಳೆಯಲ್ಲಿ ತಮಗೆ ಇಷ್ಟವಾದದ್ದನ್ನು ಬರೆದಿಟ್ಟುಕೊಳ್ಳುವುದು ತಿರುಮಲಾಂಬ ಅವರಿಗಿದ್ದ ಒಂದು ಹವ್ಯಾಸ. ಇದಕ್ಕೆ ಚಿಂತನೆಗಳ ವ್ಯಾಪ್ತಿಯೂ ಒಡಗೂಡತೊಡಗಿದಂತೆ ಅವರ ಬರಹಗಳ ವ್ಯಾಪ್ತಿ ನಾಟಕ, ಕಾದಂಬರಿ, ಕತೆ, ಭಕ್ತಿಗೀತೆಗಳಿಗೆ ವಿಸ್ತರಿಸತೊಡಗಿತು. ಒಮ್ಮೆ "ಮಧುರವಾಣಿ" ಎಂಬ ಮೈಸೂರಿನಲ್ಲಿದ್ದ ಮಾಸ ಪತ್ರಿಕೆ ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ತಿರುಮಲಾಂಬ ಅವರೂ ತಮ್ಮ ಕತೆಯನ್ನು ಕಳುಹಿಸಿಕೊಟ್ಟರು. ಇಷ್ಟು ಸುಂದರವಾದ ಕಥೆ ಬರೆದ ಲೇಖಕಿಯನ್ನು ಹುಡುಕಿಕೊಂಡು ಸ್ವಯಂ "ಮಧುರವಾಣಿ"ಯ ಸಂಪಾದಕ  ಕೆ. ಹನುಮಾನ್ ಅವರೇ ತಿರುಮಲಾಂಬ ಅವರ ಮನೆಗೆ ಬಂದರಂತೆ. ಆಗ ಅಲ್ಲಿ ಅವರಿಗೆ ಕಂಡದ್ದು ಹಲವಾರು ಬರಹಗಳ ಕಣಜ. ಹಲವು ಕತೆಗಳು, ಕಾದಂಬರಿ, ನಾಟಕ, ಪ್ರಬಂಧಗಳು ಹೀಗೆ ವೈವಿಧ್ಯಮಯ ಬರಹಗಳು ಆ ಕಣಜದಲ್ಲಿದ್ದವು. ಇವುಗಳಲ್ಲಿ "ವಿಧವಾ ಕರ್ತವ್ಯ" ಎಂಬ ಬರಹದಿಂದ ಪ್ರಭಾವಿತರಾದ ಹನುಮಾನರು, ಅದನ್ನು ತಮ್ಮ "ಮಧುರವಾಣಿ" ಪತ್ರಿಕೆಯಲ್ಲಿ ಪ್ರಕಟಿಸಿದರು.

ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಅದರ ಕುರಿತು ಹಲವಾರು ಟೀಕೆಗಳು ಬಂದುವಾದರೂ, ಅವಕ್ಕೆಲ್ಲ ಧೃತಿಗೆಡದ ತಿರುಮಲಾಂಬ,  ತಮಗೆ ಸರಿ ಎನಿಸುವುದನ್ನು ಆತ್ಮವಿಶ್ವಾಸದಿಂದ ಮಾಡುತ್ತಾ ಹೋದರು. ಸುಶೀಲ, ನಭ, ವಿದ್ಯುಲ್ಲತಾ, ಮಣಿಮಾಲಾ, ರಮಾನಂದ, ಚಂದ್ರವದನ ಅವರ ಅತ್ಯತ್ತಮ ಕಾದಂಬರಿಗಳು. ಭಕ್ತಿ ಗೀತಾವಳಿ ಅವರ ಕವನ ಸಂಕಲನ.  ಕರ್ನಾಟಕ ನಂದಿನಿ, ಸನ್ಮಾರ್ಗ ದರ್ಶಿನಿ ಪತ್ರಿಕೆಗಳ ಸಂಪಾದಕಿ ಮತ್ತು ಪ್ರಕಾಶಕಿ, ಸನ್ಮಾನ ಗ್ರಂಥಮಾಲೆಯ ಜನಕಿ. ವಿದ್ಯಾಇಲಾಖೆ ಮೈಸೂರು, ಮುಂಬಯಿ, ಮದರಾಸು (ಚೆನ್ನೈ)ಗಳಿಂದ ಬಹುಮಾನಗಳು, ಕರ್ನಾಟಕ ಸಾಹಿತ್ಯ ಪರಿಷತ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ. ಅವರು 1982 ಆಗಸ್ಟ್ 31 ರಂದು ನಿಧನರಾದರು.

ತಿರುಮಲಾಂಬಾ (ನಂಜನಗೂಡು ತಿರುಮಲಾಂಬ)

(15 Mar 1887-31 Aug 1982)