About the Author

ವಿ.ಎಸ್. ಸಂಪತ್ಕುಮಾರಾಚಾರ್ಯ ಮೈಸೂರು ಜಿಲ್ಲೆಯ ಚಾಮರಾಜ ತಾಲ್ಲೂಕಿನ ವೆಂಕಟಯ್ಯನ ಛತ್ರ ಅಗ್ರಹಾರದವರು.ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್) ಬಿ.ಎಡ್‌. ರಾಷ್ಟ್ರಭಾಷಾ ವಿಶಾರದ ಹಾಗೂ ಕಾಶಿಯ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಹೊಯ್ಸಳ ಯುಗದ ಜನಜೀವನ’ ಎಂಬುದು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಪಿಎಚ್ ಡಿ  ಪಡೆದ ಮಹಾಪ್ರಬಂಧ.  ತಮಿಳುನಾಡಿನ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರಾದರು. ಕರ್ನಾಟಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ಸಂಗೀತ ಸಾಹಿತ್ಯ ಕ್ಷೇತ್ರದಲ್ಲೂ ಇವರ ಆಸಕ್ತಿ. 

ಕೃತಿಗಳು: ಸಂಗೀತ ಮತ್ತು ಅದರ ಇತಿಹಾಸ ವಾದ್ಯಗಳು, ನಾನಾ ನೃತ್ಯ ಪ್ರಕಾರಗಳು, ಶಾಸ್ತ್ರ ಗ್ರಂಥಗಳು, ಸಂಗೀತಜ್ಞರು, ಸಂಗೀತಗಾರರು ಮುಂತಾದ ನಾನಾ ವಿವರಣೆಗಳು ಒಳಗೊಂಡ ವಿಶ್ವಕೋಶದಂತಿರುವ ‘ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ’ ಎರಡು ಸಂಪುಟಗಳಲ್ಲಿ ನೀಡಿದ್ದಾರೆ. ‘ಕರ್ನಾಟಕ ಸಂಗೀತ ಸುಧಾ’, ‘ಸದ್ಗುರು ತ್ಯಾಗರಾಜರು’, ಶ್ರೀ ತ್ಯಾಗರಾಜ ಕೃತಿ ಮಂಜರಿ’, ‘ಸಂಗೀತ ರಸಿಕ ರಂಜನಿ’, ‘ಸಂಗೀತ ಕಲೆಗೆ ಮೈಸೂರು ಒಡೆಯರ ಪ್ರೋತ್ಸಾಹ’, ‘ಶ್ರೀ ತ್ಯಾಗರಾಜ ವಿಜಯ’, ‘ಕರ್ನಾಟಕ ಸಂಗೀತ ದೀಪಿಕೆ’, ಎಳೆಯರಿಗೆ ಸಂಗೀತ ಸುಧಾರಸ’, ‘ರಾಜರು ಮತ್ತು ರಾಜ್ಯಗಳು’, ‘ಕೃಷ್ಣದೇವರಾಯನ ವಿಸ್ತಾರ ದಿನಚರಿ’ ಇತ್ಯಾದಿ ಕೃತಿಗಳು. ಶ್ರೀ ಆಂಡಾಳ್‌ತಿರುಪ್ಪಾವೈ ಶ್ರೀ ಯಮುನಾಚಾರ್ಯರ ಚತುಃಶ್ಲೋಕಿ ಸ್ತೋತ್ರ ರತ್ನಗಳ ಅನುವಾದ ಕನಕದಾಸರ ನವ ವಿಧಭಕ್ತಿ ಇತ್ಯಾದಿ ಪ್ರೌಢ ಆಂಗ್ಲ ಲೇಖನಗಳು – ಪುಸ್ತಕಗಳು ಸಂಗೀತ ಸರಸ್ವತಿಗೆ ಶ್ರೀಯುತರು ಸಮರ್ಪಿಸಿರುವ ಸೇವಾ ಪುಷ್ಪಗಳು.

ಪ್ರಶಸ್ತಿ-ಪುರಸ್ಕಾರಗಳು: ಮೈಸೂರು ಬೆಂಗಳೂರಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳೂ ಸಭೆಗಳೂ ಇವರ ಸೇವೆಯನ್ನು ಗುರುತಿಸಿ ಆದರಿಸಿವೆ. ಮೊಟ್ಟಮೊದಲ ಬಾರಿಗೆ ಶ್ರೀ ತ್ಯಾಗರಾಜರ ಸಮಗ್ರ ರಚನೆಗಳ ಪೂರ್ಣ ಪಾಠ ತಾತ್ಪರ್ಯ ಪದಶಃ ಅರ್ಥ ಟಿಪ್ಪಣಿಗಳನ್ನೊಳಗೊಂಡ ಸಂಪುಟವನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’, ‘ಲಲಿತ ಕಲಾಶ್ರಯ’ ಮುಂತಾದ ಪ್ರಶಸ್ತಿಗಳೂ ಪ್ರಾಪ್ತವಾಗಿವೆ.

ವಿ.ಎಸ್. ಸಂಪತ್ಕುಮಾರಾಚಾರ್ಯ

(01 Oct 1925)