About the Author

ವಿಭಾ, ಕನ್ನಡ ಕಾವ್ಯ ಲೋಕದಲ್ಲಿ ಅಚ್ಚಳಿದ ಹೆಸರು.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನ ಮಹಲಿಂಗಪುರ ಅವರ ಹುಟ್ಟೂರು. ತಂದೆ- ಅರವಿಂದ ತಿರಕಪಡಿ, ತಾಯಿ- ಸಾವಿತ್ರಿ. ಎಂ.ಎ  (ಇಂಗ್ಲಿಷ್) ಪದವೀಧರರು ವಿಭಾ, ಬಾಗಲಕೋಟೆಯ ವಿಭಾಗೀಯ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ‘ಜೀವ ಮಿಡಿತದ ಸದ್ದು’(ಕಾವ್ಯ), ‘ಹರಿವ ನೀರೊಳಗಿನ ಉರಿ’(ಅನುವಾದ ಕಾವ್ಯ), ‘ಬೆತ್ತಲೆ ರಸ್ತೆಯ ಕನಸಿನ ದೀಪ’(ಕೈಫಿ ಅಜ್ಮಿ ಕವಿತೆಗಳ ಅನುವಾದ) ‘ನನ್ನ ಪ್ರೀತಿಯ ಅಪ್ಪ’- ಕೈಫಿ ಅಜ್ಮಿ ಕವಿತೆಗಳು (ಅನುವಾದ) ಕೃತಿಗಳನ್ನು ನೀಡಿದ್ದಾರೆ.

ಸಾಹಿತ್ಯ ಸೇವೆಗಾಗಿ ಸತತ ಐದು ವರ್ಷ ಕ್ರೈಸ್ಟ್ ಕಾಲೇಜಿನ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಸಕಾಲಿಕ ಪತ್ರಿಕೆಗಳ ಬಹುಮಾನ, ಕಲೇಸಂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಡಿ.ಎಸ್. ಕರ್ಕಿ ಕಾವ್ಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಹರಿಹರದ ಹರಿಹರ ಶ್ರೀ ಪ್ರಶಸ್ತಿ ಲಭಿಸಿದೆ. ಲಡಾಯಿ ಪ್ರಕಾಶನದ ಮಾಲೀಕ ಬಸವರಾಜು ಸೂಳಿಬಾವಿ ಅವರೊಂದಿಗೆ ವಿವಾಹವಾದ ವಿಭಾ, ಅಕಾಲದಲ್ಲಿ ಸಾವನ್ನಪ್ಪಿದರು. ಆದರೆ, ಸಾಹಿತ್ಯ ಲೋಕದಲ್ಲಿ ಅವರು ಮಾಡಿದ ಕೃಷಿ ಫಲ ಕೊಡುತ್ತಲೇ ಇದೆ. ವಿಭಾ ಅವರ ಹೆಸರಿನಲ್ಲಿಯೇ ಲಡಾಯಿ ಪ್ರಕಾಶನ ಪ್ರಶಸ್ತಿಯನ್ನು ಘೋಷಿಸುತ್ತದೆ. ಕನ್ನಡ ಸಾಹಿತ್ಯಲೋಕದ ಮಹತ್ವದ ಪ್ರಶಸ್ತಿಗಳಲ್ಲಿ ಒಂದಾಗಿರುವ ವಿಭಾ ಸಾಹಿತ್ಯ ಪ್ರಶಸ್ತಿ ಹೆಸರಿನಲ್ಲಿ ವಿಭಾ ಇಂದಿಗೂ ಸಾಹಿತ್ಯ ಕ್ಷೇತ್ರದಲ್ಲಿ ಜೀವಂತವಾಗಿದ್ದಾರೆ. 

ವಿಭಾ

(27 Sep 1977-21 Mar 2004)