ವಿಜಯಶ್ರೀ ಅವರು ಮೂಲತಃ (ಜನನ 14-06-1954) ಶಿವಮೊಗ್ಗದವರು. ತಂದೆ ಕೆ.ಜಿ. ಮಲ್ಲಪ್ಪಯ್ಯ, ತಾಯಿ ಹಂಪಾಂಬೆ ಪಾಟೀಲ್.ಹಿಂದೂಸ್ತಾನಿ ಸಂಗೀತ(ಸೀನಿಯರ್), ಪತ್ರಿಕೋದ್ಯಮ ಪದವೀಧರರು. ಸಮಾಜ ಸೇವಾ ಕಾರ್ಯಕರ್ತರು,
‘ಗೋರಿಯಿಂದ ಎದ್ದು ಬಂದವರು’ ಕವನ ಸಂಕಲನ. ‘ಎರಡು ರೂಪಾಯಿ’ ಅವರ ಕಥಾಸಂಕಲನ. ‘ಹುಡುಕಾಟ, ಗೊಂಚಲು (ಶಿವಮೊಗ್ಗ ಜಿಲ್ಲಾ ಕವಿಗಳ ಕವಿತೆಗಳ ಸಂಗ್ರಹ)’ ಅವರ ಸಂಪಾದನೆ ಹಾಗೂ ಜನಪದ ಗೀತೆಗಳ ‘ಸವಿದನಿ' ಎಂಬ ಧ್ವನಿಸುರುಳಿ ಬಿಡುಗಡೆ ಮಾಡಿದ್ದಾರೆ.
‘ಆಕಾಶ ಸುಂದರಿ’ ಕಾದಂಬರಿ ‘ಚೈತ್ರದ ಚಿಗುರು’ ಎಂಬ ಹೆಸರಿನ ಚಲನಚಿತ್ರವಾಗಿದೆ. ‘ಜೋಡಿಹಂಸ, ಗಗನಸಖಿ, ಭ್ರಮಾಧೀನೆ, ಕಾರ್ಮೋಡ, ಸ್ನೇಹಪಂಜರ, ನಾವಿಕನಿಲ್ಲದ ನೌಕೆ, ಅಲೆಗಳ ನಡುವೆ, ದೂರದ ತೀರ, ಮೀರದ ಶೃತಿ, ಹೃದಯ ಸ್ಪಂದನ, ಅವ್ಯಕ್ತದಾಚೆಯಿಂದ, ನೋವಿನ ನೆರಳುಗಳು, ಕಪ್ಪುಮನಸಿನ ಬಿಳಿಜನ, ಕನಸಿನೊಳಗಿನ ಕನಸು, ಮಂಜಿನ ಮನೆ, ಉರಿಯುವ ಆತ್ಮಗಳು, ಬೆರೆತ ಭಾವಗಳು, ವಾತ್ಸಲ್ಯದ ಹಾದಿಗಳು, ನಾಗಲತೆ, ಜಾಲದಲ್ಲಿ ಜಾಲ, ಬಣ್ಣದ ಬೆಡಗು’ ಮೊದಲಾದ 76ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.
`ದೂರದ ತೀರ, ನಾವಿಕನಿಲ್ಲದ ನೌಕೆ, ಕಾಲ ನುಂಗಿದ ಮನುಷ್ಯ, ತಪ್ಪು ಯಾರದು, ವಾಸವಿ' ಅವರ ರೇಡಿಯೋ ನಾಟಕಗಳು. ‘ಒಂಟಿ ಕೊಂಬಿನ ರಾಕ್ಷಸ’ ಮಕ್ಕಳ ಕತೆ ಹಾಗೂ ‘ನನ್ನ ಮಗಳ ಎಪ್ಲಾಸ್ಟಿಕ್ ಅನೀಮಿಯಾ’ ಜೀವನಕಥನವನ್ನು 2011ರಲ್ಲಿ ಹೊರತಂದಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲಿದ್ದಾಗ ರಾಜ್ಯಮಟ್ಟದ ತ್ರಿವೇಣಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಆಕಾಶ ಸುಂದರಿ ಕಾದಂಬರಿ ಚೈತ್ರದ ಚಿಗುರು ಚಲನಚಿತ್ರವಾಗಿ 1994ರ ಪ್ರಥಮ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಶಿಕಾರಿಪುರ ಎರಡನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ,ಬಿ.ಎಸ್.ಚಂದ್ರಕಲಾ ಪ್ರತಿಷ್ಠಾನದ ಲಿಪಿಪ್ರಾಜ್ಞೆ ಪ್ರಶಸ್ತಿ ಮುಂತಾದವು ಸಂದಿದೆ.
ನಾಟಕಗಳಿಗೆ ಸಂಗೀತ ನಿರ್ದೇಶನ, ಭಾವಗೀತೆ ಜನಪದ ಗೀತೆ ಚಿತ್ರ ಗೀತೆಗಳ ಗಾಯಕಿ, ಚಿತ್ರದೀಪ, ಚಿತ್ರತಾರಗಳಿಗೆ ಜಿಲ್ಲಾ ವರದಿಗಾರರು, ನಾಟಕಗಳಲ್ಲಿ ಅಭಿನಯ. ಅನೇಕ ಜಾನಪದ ರೂಪಕಗಳ ರಚನೆ, ಕಾರಂತರ ಕಿಸಾಗೋತಮಿಗೆ ಸಂಗೀತ ನಿರ್ದೇಶನ, ಆಕಾಶವಾಣಿ ನಾಟಕ ವಿಭಾಗದ ಕಲಾವಿದೆ, ಪ್ರತಿಭಾರಂಗ ಸಾಂಸ್ಕೃತಿಕ ಸಂಘದ ಸ್ಥಾಪಕಿ, ನಿರ್ದೇಶಕಿ, ಅಧ್ಯಕ್ಷೆಯಾಗಿ, ಶಿವಮೊಗ್ಗ ಕರ್ನಾಟಕ ಸಂಘದ ನಿರ್ದೇಶಕಿಯಾಗಿ, ಅತಿಥಿ ನಟಿಯಾಗಿ ಚಲನಚಿತ್ರಗಳಲ್ಲಿ ಅಭಿನಯ, ದೂರದರ್ಶನ ಧಾರಾವಾಹಿಗಳ ರಚನೆ, ಓದುವಾಗಲೇ ಕಾವ್ಯಶ್ರೀ ಪ್ರಕಾಶನದ ಸ್ಥಾಪನೆ. ಕಾವ್ಯ-ಚಿತ್ರ-ಸಂಗೀತ ಸಂಗಮಗಳ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.