ಕ್ಯಾಂಪಸ್ ಕಥನಗಳು – ಹಲ್ಲೆಗಳನ್ನು ಮೆಟ್ಟಿನಿಂತ ಪ್ರತಿರೋಧಗಳು

Author : ಸತ್ಯಾ ಎಸ್.

Pages 112

₹ 80.00
Year of Publication: 2020
Published by: ಕ್ರಿಯಾ ಮಾಧ್ಯಮ ಪ್ರೈ.ಲಿ.
Address: 37/ಎ, 4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು –560 086
Phone: 9448578021

Synopsys

ಭಾರತದ ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳು ಕುರಿತಂತೆ ಜನ ನ್ಯಾಯ ಮಂಡಳಿಯು ನೀಡಿದ ವರದಿಯ ಸಂಕ್ಷಿಪ್ತರೂಪವೇ ಈ ಪುಸ್ತಕ-ಕ್ಯಾಂಪಸ್ ಕಥನಗಳು-ಹಲ್ಲೆಗಳನ್ನು ಮೆಟ್ಟಿನಿಂತ ಪ್ರತಿರೋಧಗಳು. 

ವಿದ್ಯಾರ್ಥಿಗಳು, ಉಪನ್ಯಾಸಕರು, ವಿಷಯ ಪರಿಣಿತರು ಒಳಗೊಂಡಂತೆ ಸುಮಾರು 130ಕ್ಕೂ ಅಧಿಕ ಶಿಕ್ಷಣಪ್ರೇಮಿಗಳ ಹೇಳಿಕೆಗಳನ್ನು ದಾಖಲಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

 

About the Author

ಸತ್ಯಾ ಎಸ್.

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಇರುವ ಸತ್ಯಾ ಎಸ್ ಆವರು ಮೂಲತಃ ಪತ್ರಕರ್ತೆ. ಮುಖ್ಯವಾಹಿನಿ ಪತ್ರಿಕೋದ್ಯಮ ತೊರೆದು ಸ್ವಲ್ಪ ಕಾಲ ಸಂಶೋಧನೆ, ಬರವಣಿಗೆಗಳಲ್ಲಿ ತೊಡಗಿಸಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಸ್ವತಂತ್ರ ಸಂವಹನ ಸಮಾಲೋಚಕರಾಗಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ಶಿಕ್ಷಣ, ಆರೋಗ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳಾಪರ ಹಾಗೂ ಕೋಮುವಾದ ವಿರೋಧಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಯನ್ನು ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ’ನೆಲದ ಸಿರಿ’ ಇವರ ಸಂಪಾದಿತ ಕೃತಿ. ...

READ MORE

Excerpt / E-Books

ಜನ ನ್ಯಾಯಮಂಡಳಿಯ ಮುಂದೆ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ತಜ್ಞರು ಮಂಡಿಸಿದ ಹೇಳಿಕೆಗಳು, ಖಾಸಗೀಕರಣ ಮತ್ತು ಜಾಗತೀಕರಣವು ನಮ್ಮ ಶಿಕ್ಷಣ, ಶಿಕ್ಷಣ ಸಂಸ್ಥೆಗಳು ಹಾಗೂ ಅವುಗಳ ಘಟಕಗಳ ಮೇಲೆ ಉಂಟು ಮಾಡಿರುವ ದುಷ್ಪರಿಣಾಮದ ಅಗಾಧತೆಗೆ ಸಾಕ್ಷಿಯಾಗಿದ್ದವು. ಶಿಕ್ಷಣ ಶುಲ್ಕದ ಏರಿಕೆ, ಹಣಕಾಸು ನೆರವಿನ ಹಿಂತೆಗೆತ, ವಿದ್ಯಾರ್ಥಿವೇತನ ಕಡಿತ, ಪ್ರವೇಶ ಪ್ರಕ್ರಿಯೆಯ ಕೇಂದ್ರೀಕರಣ, ಸಂಸ್ಥೆಗೆ ಲಾಭದಾಯಕವಾಗಿಲ್ಲದ ಕೋರ್ಸುಗಳ ನಿಲುಗಡೆ ಮೊದಲಾದ ರೂಪದಲ್ಲಿ ಖಾಸಗೀಕರಣವು ಉನ್ನತ ಶಿಕ್ಷಣದ ಮೇಲೆ ನಡೆಸಿರುವ ದಾಳಿಯನ್ನು ವಿರೋಧಿಸಿ ವಿದ್ಯಾರ್ಥಿ-ಉಪನ್ಯಾಸಕರ ಸಮುದಾಯವು ನಡೆಸಿದ ಧೀರ ಹೋರಾಟಗಳನ್ನು ಹಾಗೂ ಹೋರಾಟದ ಮೂಲಕ ಸರ್ಕಾರದ ಈ ನೀತಿ-ನಿಯಮಗಳನ್ನು ವಿರೋಧಿಸಿದ್ದಕ್ಕಾಗಿ ಅವರು ಎದುರಿಸಿದ ಪ್ರತೀಕಾರ ಕ್ರಮಗಳನ್ನೂ ಈ ಸಾಕ್ಷ್ಯಗಳು ತೆರೆದಿಟ್ಟವು.

ಖಾಸಗೀಕರಣ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಈ ವಿದ್ಯಾರ್ಥಿ-ಉಪನ್ಯಾಸಕರ ಸಮುದಾಯವು, ಭಾರತದಲ್ಲಿ ಶಿಕ್ಷಣದ ಹಕ್ಕಿನ ಮೇಲೆ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಸರ್ಕಾರವೇ ನಡೆಸುತ್ತಿರುವ ದಾಳಿಯನ್ನು ತಡೆಯುವ ಏಕೈಕ ಶಕ್ತಿಯಾಗಿಯೂ ಹೊರಹೊಮ್ಮಿರುವುದು ಈ ವಿಚಾರಣೆಯ ಸಂದರ್ಭದಲ್ಲಿ ನಿಚ್ಚಳವಾಯಿತು. … ನ್ಯಾಯಮಂಡಳಿಯ ಮುಂದೆ ಮಂಡಿಸಲಾದ ಸಾಕ್ಷ್ಯಗಳಿಂದ ಸ್ಪಷ್ಟವಾಗಿ ಮೂಡಿಬಂದ ಮತ್ತೊಂದು ಆತಂಕಕಾರಿ ವಿದ್ಯಮಾನವೆಂದರೆ, ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಕೋಮುವಾದ, ಪಠ್ಯಪುಸ್ತಕಗಳಲ್ಲಿ ಇತಿಹಾಸದ ತಿರುಚುವಿಕೆ, ಜಾತ್ಯತೀತ ಸತ್ಯಗಳನ್ನು ಕಿತ್ತುಹಾಕುವುದು ಮತ್ತು ಬಲಪಂಥೀಯ ಸರ್ಕಾರವು ತನ್ನ ಅಜೆಂಡಾವನ್ನು ಜಾರಿಗೊಳಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳನ್ನು ಅತಿಕ್ರಮಿಸುತ್ತಿರುವುದರಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆ ಉಂಟಾಗಿರುವುದು. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಹೊರದೂಡುವಿಕೆ, ಪ್ರತ್ಯೇಕತೆ, ಕಡೆಗಣಿಸುವಿಕೆ, ನಿರ್ಲಕ್ಷ್ಯದ ನಡೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಜಾರಿಗೆ ತರುವ ಸಲುವಾಗಿ ಅನುಸರಿಸುತ್ತಿರುವ ಅನ್ಯಾಯದ ಕ್ರಮಗಳನ್ನು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಲ್ಲಿಸಿದ ಸಾಕ್ಷ್ಯಗಳು ಬಹಿರಂಗಪಡಿಸಿದವು.

Reviews

ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಆವರಣವು ಕುಗ್ಗುತ್ತಿದೆ

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಅವರನ್ನು ಅಪರಾಧಿಗಳಂತೆ ಚಿತ್ರಿಸಲಾಗುತ್ತಿದೆ. ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಆವರಣವು ಕುಗ್ಗುತ್ತಿದೆ. ಈ ಬಗ್ಗೆ ನಾಗರಿಕರು, ಸಾಮಾಜಿಕ ಸಂಘಟನೆಗಳು ಆತಂಕಗೊಂಡಿವೆ. ಈ ಹಿನ್ನೆಲೆಯಲ್ಲಿ ’ಕುಗ್ಗುತ್ತಿರುವ ಪ್ರಜಾಸತ್ತಾತ್ಮಕ ಆವರಣ ಕುರಿತ ನಾಗರಿಕ ಆಯೋಗ’ (ಪೀಪಲ್ಸ್ ಕಮಿಷನ್ ಆನ್ ಶ್ರಿಂಕಿಂಗ್ ಡೆಮಾಕ್ರೆಟಿಕ್ ಸ್ಪೇಸ್ – ಪಿಸಿಎಸ್‌ಡಿಎಸ್) ಎಂಬ ರಾಷ್ಟ್ರ ಮಟ್ಟದ ವೇದಿಕೆಯನ್ನು ಸ್ಥಾಪಿಸಲಾಗಿದೆ.

ಸದಸ್ಯತ್ವವನ್ನು ಆಧರಿಸಿದ ಈ ವೇದಿಕೆಯು, ಪ್ರಾದೇಶಿಕ ಹಂತದಲ್ಲಿ ಹಲವಾರು ಚರ್ಚೆ, ಸಭೆ, ಸಂವಾದಗಳನ್ನು ನಡೆಸಿದ ನಂತರ 2016 ರ ಮೇ 21 ಮತ್ತು 22ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶವನ್ನು ಏರ್ಪಡಿಸಿತ್ತು. ಅಲ್ಲಿ ವೇದಿಕೆಯ ನಿಯಮಾವಳಿಯನ್ನು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅದೇ ಸಮ್ಮೇಳನದಲ್ಲಿ, ಎರಡು ವಿಷಯಗಳ ಕುರಿತು ಜನನ್ಯಾಯಮಂಡಳಿಯನ್ನು ಸ್ಥಾಪಿಸಿ ಸಾಕ್ಷ್ಯ ಸಂಗ್ರಹಿಸಿ, ವರದಿ ಮಾಡಬೇಕು ಎಂದೂ ನಿರ್ಧರಿಸಲಾಯಿತು.

ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಆಕ್ರಮಣ, ನೈಸರ್ಗಿಕ ಸಂಪನ್ಮೂಲದ ರಕ್ಷಣೆಗೆ ಕೆಲಸ ಮಾಡುತ್ತಿರುವ ಮಾನವ ಹಕ್ಕು ಹೋರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆಗಳು; ಹೀಗೆ ಪ್ರಮುಖ ವಿಷಯಗಳಾಧರಿಸಿ ರೂಪುಗೊಂಡ ’ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಹಲ್ಲೆ’ ಶೀರ್ಷಿಕೆಯಡಿ ಜನ ನ್ಯಾಯಮಂಡಳಿ’ ಯ ವರದಿಯಲ್ಲಿ  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿದಂತೆ 130 ಜನರ ಹೇಳಿಕೆಗಳು ಮಾತ್ರವಲ್ಲದೆ, ತಜ್ಞರ ಹೇಳಿಕೆಗಳು ಹಾಗೂ ಪರಿಣತರ ಅಭಿಪ್ರಾಯಗಳು ಇವೆ.

ಶಿಕ್ಷಣ ಸಂಸ್ಥೆಗಳ ಮೇಲಿನ ಹಲ್ಲೆಗಳು ಅಂದರೆ ಈ ದೇಶದ ಮುಂದಿನ ಜನಾಂಗ ಅಂದರೆ ನಮ್ಮ ಮಕ್ಕಳ ಭವಿಷ್ಯದ ಮೇಲಿನ ದಾಳಿ. ನಮ್ಮ ದೇಶದ ಭವಿಷ್ಯದ ಕುರಿತಾಗಿ ಕಾಳಜಿ ಇರುವವರೆಲ್ಲರೂ ಓದ ಬೇಕಾದ ಪುಸ್ತಕ ಇದು.

ಕೃಪೆ: ಪುಸ್ತಕ ಪ್ರೀತಿ, 2020ರ ಫೆ.12. 

Related Books