About the Author

ಎ. ಪಂಕಜ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿ 1932 ರ ಏಪ್ರಿಲ್‌ 20ರಂದು ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದಿದ್ದರು. ಓದಿದ್ದು ಇಂಟರ್ ಮೀಡಿಯಟ್‌ ಆದರೂ ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ ಪಡೆದಿದ್ದಾರೆ. ಅವರ ಮೊದಲ ಕವನ ‘ಜ್ಯೋತಿ ನಂದಿತು’. ಇಂಗ್ಲಿಷ್‌, ಹಿಂದಿ, ತೆಲುಗು ಭಾಷೆಯಿಂದ  ಕನ್ನಡಕ್ಕೆ ಹಲವಾರು ಕಥೆಗಳನ್ನು ಅನುವಾದಿಸಿದ್ದಾರೆ.

ಇವರ ಮೊದಲ ಕಥೆ ಪ್ರಕಟವಾದುದು ‘ತಾಯಿನಾಡು’ ಪತ್ರಿಕೆಯಲ್ಲಿ. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು. ‘ನಾದಭಂಗ’, ‘ವಿಜಯಗೀತ’, ‘ಸೊಗಸುಗಾತಿ’, ‘ಬಂಗಾರದ ಬಲೆ’, ‘ಕಾಗದದ ದೋಣಿ’, ‘ಬಲಿಪಶು’, ‘ಮಧು’, ‘ನಾಗರ ನೆರಳು’ ಅವರ ಪ್ರಮುಖ ಕಾದಂಬರಿಗಳು. 

ಆರ್ಥಿಕವಾಗಿ ಹಿಂದುಳಿದಿರುವ, ದುರ್ಬಲ ವರ್ಗದ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರ ಉನ್ನತಿಗಾಗಿ ಬ್ಯಾಂಕೊಂದರ ಅವಶ್ಯಕತೆಯನ್ನೂ ಮನಗಂಡು, ಸ್ಥಾಪಿಸಿದ್ದು ‘ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್‌’. ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಲ್ಲೊಂದಾದ ಈ ಬ್ಯಾಂಕ್ನಲ್ಲೀಗ ಶೇ. 80 ರಷ್ಟು ಷೇರುದಾರರು ಮಹಿಳೆಯರೇ ಆಗಿದ್ದು ಹೊಲಿಗೆ ಯಂತ್ರ, ಕುಕ್ಕರ್, ಮಕ್ಕಳ ಫೀ, ಮನೆ ರಿಪೇರಿ, ಊದುಬತ್ತಿ ಗೃಹ ಕೈಗಾರಿಕೆ ಮುಂತಾದವುಗಳಿಗೆ ಸಾಲ ಪಡೆದು ಸ್ವಾವಲಂಬಿಗಳಾಗಿ ಬದುಕಲು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ.

ಅವರ ಸಮಾಜೋಮುಖಿ ಹಾಗೂ ಸಾಹಿತ್ಯ ಕೆಲಸಗಳಿಗಾಗಿ ಸರೋಜ ದೇವಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ನೇತಾಜಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಎ. ಪಂಕಜ

(20 Apr 1932)