About the Author

ಲೇಖಕ ಅಡ್ಡಂಡ ಕಾರ್ಯಪ್ಪ ಅವರು ಮೂಲತಃ ಕೊಡಗು ಜಿಲ್ಲೆಯವರು. ತಂದೆ ಅಡ್ಡಂಡ ಚೆಂಗಪ್ಪ, ತಾಯಿ ಅಡ್ಡಂಡ ತಂಗಮ್ಮ. ರಂಗಾಯಣ ಮೈಸೂರಿನ ನಿರ್ದೇಶಕರಾಗಿದ್ದರು.   ಬಿ.ಎ. ಪದವಿಯ ನಂತರ ನೀನಾಸಂ ರಂಗಶಿಕ್ಷಣದಲ್ಲಿ ರಂಗಭೂಮಿ ಕುರಿತಂತೆ ತರಬೇತಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಸೃಷ್ಠಿ ಕೊಡವ ರಂಗ ಎಂಬ ತಮ್ಮದೇ ಒಂದು ರೆಪರ್ಟರಿ ರಂಗತಂಡವನ್ನು ಕಟ್ಟಿ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ನಾಡಿನಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡಿದರು. ಮ್ಯಾಕ್‌ಬೆತ್, ಹ್ಯಾಮ್ಲೆಟ್, ಕಿಂಗ್‌ಲಿಯರ್, ಈಡಿಪಸ್, ದಂಗೆ ಮುಂಚಿನ ದಿನಗಳು, ಅರುಂಧತಿ ಆಲಾಪ, ತಬರನ ಕಥೆ ಮುಂತಾದ 20ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದು, ಸುಮಾರು 20 ಕ್ಕೂ ಹೆಚ್ಚು ಕೊಡವ ನಾಟಕಗಳು, ಮಕ್ಕಳ ನಾಟಕಗಳು ಮತ್ತು ಬೀದಿನಾಟಕಗಳನ್ನು ನಿರ್ದೇಶಿಸಿದ್ದಾರೆ.  10 ಕ್ಕೂ ಹೆಚ್ಚು ಕನ್ನಡ ಮತ್ತು ಕೊಡವ ನಾಟಕಗಳನ್ನು ರಚಿಸಿ, ಪ್ರಕಟಿಸಿದ್ದಾರೆ. 2012 ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗದವರಿಗಾಗಿ ರಂಗ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ಇವರು ‘ಬಾಳ್ ಪೊಲಂದತ್’ ಎಂಬ ಚಲನಚಿತ್ರವನ್ನು ನಿರ್ದೇಶಿಸಿ, ಉತ್ತಮ ಪ್ರಾದೇಶಿಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್’ ಮತ್ತು ಕರ್ನಾಟಕದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಅಲ್ಲದೆ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೊಡವ ವಿದ್ಯಾ ನಿಧಿ ಪ್ರಶಸ್ತಿ ಮತ್ತು ಸಿ.ಜಿ.ಕೆ. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಅನಿತಾ ಕಾರ್ಯಪ್ಪ ರವರು ಕೂಡ ಸೃಷ್ಠಿ ಕೊಡವ ರಂಗ ದ ಸಕ್ರಿಯ ಸದಸ್ಯರು. ಟಿಪ್ಪು ಮತ್ತು ಕೊಡವರು ಎಂಬ ಕೃತಿಯನ್ನು ರಚಿಸಿದ್ದಾರೆ. 

ಅಡ್ಡಂಡ ಕಾರ್ಯಪ್ಪ