About the Author

ಲೇಖಕ, ಅನುವಾದಕ, ಸಾಹಿತ್ಯ ಸಂಘಟಕ ಅಜ್ಜಂಪುರ ಜಿ. ಸೂರಿ ಅವರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ಜನಿಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸರ್ಕಾರಿ ಸೇವೆ ಆರಂಭಿಸಿದ ಅವರು ಕ್ಷೇತ್ರಾಭಿವೃದ್ಧಿ ಅಧಿಕಾರಿಯಾಗಿ ನಿವೃತ್ತರಾದರು.

ಕನ್ನಡ-ತೆಲುಗು ಸಾಹಿತ್ಯ ಬಲ್ಲವರು. ಕವಿ, ವಚನಕಾರ, ಕಾದಂಬರಿಕಾರ, ಪ್ರಬಂಧಕಾರ ಹಾಗೂ ಚಿಂತನಶೀಲ ಬರಹಗಾರರು. ಅನೇಕ ತೆಲುಗು ಕೃತಿಗಳನ್ನು ಅನುವಾದಿಸಿದ್ದಾರೆ. ಅನೇಕ ನಾಟಕಗಳು ಬಾನುಲಿಯಲ್ಲಿಯೂ ಪ್ರಸಾರವಾಗಿವೆ. ಒಟ್ಟು 15 ಕಾದಂಬರಿಗಳನ್ನು ರಚಿಸಿದ್ದು ಆರು ಬಾನುಲಿ ನಾಟಕಗಳು, ಮೂರು ರಂಗನಾಟಕಗಳು ಹಾಗೂ ಇನ್ನಿತರ ಕೃತಿಗಳು ಪ್ರಕಟವಾಗಿವೆ. 

ಸಂಯುಕ್ತ ಕರ್ನಾಟಕ, ತರಂಗ, ವಾರಪತ್ರಿಕೆ, ಮಂಗಳ, ಲೋಕವಾಣಿ, ಮಯೂರ, ಅಭಿಮಾನಿ, ವಾರದ ರಾಜಕೀಯ, ಪ್ರಜಾಮತ, ಸುಧಾ, ಕರ್ಮವೀರ, ಪತ್ರಿಕೆಗಳಲ್ಲಿ ಧಾರಾವಾಹಿ ಕಾದಂಬರಿಗಳು ಪ್ರಕಟವಾಗಿವೆ. ಚಿಕ್ಕಮಗಳೂರು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ, ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಉನ್ನತ ಸಮಿತಿಯ ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ. ‘ಶಾಪ್, ಹೊಸಚಿಗುರು, ಮಾರ್ಗದರ್ಶಿ, ಶ್ವೇತಾಗ್ನಿ, ವಿಮುಕ್ತಿ, ನೇಗಿಲ ಗದ, ಗುರು, ಉಮರ್ ಖಯಾಂ, ಸಂಸ್ಕೃತಿ, ಸಂಪ್ರದಾಯ, ಸಿದ್ದಪರುಷ, ತೋಟದ ಮನೆ, ಎರಡು ಮನಸ್ಸು, ಅನುಬಂಧ, ತತ್ವಪದಗಳು, ಶ್ರೀಗುರು ನಿರ್ವಾಣ ಸಿದ್ದರು’ ಅವರ ಮುಖ್ಯ ಕಾದಂಬರಿಗಳು.

‘ಕೊನೆಯಾಸ, ಕುಳ್ಳರು, ಬೋನಿಗೆ ಬಿದ್ದ ಹುಲಿ, ಮರಗಡುಕ, ಪ್ರೇತಗಳು, ಸುಮಂಗಲಿಯರು, ಧನ್ಯಭಿಕ್ಷ, ಒಂದೇ ಜನ ಒಂದೇ ಮನ’ ಅವರ ಮತ್ತಿತರ ಕೃತಿಗಳು. ‘ಪರಿವರ್ತನೆ, ಅಂತರ ಸಂಪಾದಕ: ಪುಣ್ಯಕೋಟಿ, ಬಯಲು, ಹಸಿರು, ಅನುವಾದ: ಸಂಸ್ಕರಣ, ಕಾಲರುದ್ರ’ ಇತ್ಯಾದಿ ರಂಗನಾಟಕಗಳನ್ನು ರಚಿಸಿದ್ಧಾರೆ. ಚಿಕ್ಕಮಗಳೂರು ಭಾರ್ಗವ ಪ್ರಕಾಶನ ರಾಜ್ಯ ಮಟ್ಟದ ಪ್ರಶಸ್ತಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಮಗಳೂರು ಹನುಮಂತಪ್ಪ ವೃತ್ತದವರ ಮಲೆನಾಡ ರತ್ನ ಪ್ರಶಸ್ತಿ, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತಿನ ದ್ವಿಶತಮಾನೋತ್ಸವದಲ್ಲಿ ಸನ್ಮಾನಗಳು ಲಭಿಸಿವೆ. ಅವರು 2008 ರ ಮೇ 25ರಂದು ನಿಧನರಾದರು. 

ಅಜ್ಜಂಪುರ ಜಿ. ಸೂರಿ

(16 Apr 1939-25 May 2008)