About the Author

ದಿವಂಗತ ನಂದಳಿಕೆ ಅಮ್ಮುಂಜೆ ಗುತ್ತು ಶೀನಪ್ಪ ಹೆಗ್ಗಡೆಯವರು (ಅಮ್ಮುಂಜೆ ಶೀನಪ್ಪ ಹೆಗ್ಗಡೆ ) ಎನ್.ಎ. ಶೀನಪ್ಪ ಹೆಗ್ಗಡೆ ಎಂದು ಪ್ರಸಿದ್ಧರಾದ ತುಳು ಕನ್ನಡ ಸಾಹಿತಿ. ಪೊಳಲಿಯಿಂದಲೇ ಶ್ರೀಯುತರು ತುಳುನಾಡಿನಲ್ಲಿ ಹಾಗೂ ತುಳುಸಾಹಿತ್ಯ, ಸಂಶೋಧನೆಯಲ್ಲಿ ತೊಡಗಿದರು. ಪೊಳಲಿ ಶೀನಪ್ಪ ಹೆಗ್ಗಡೆಯವರು ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗುತ್ತಿನವರು. ತಂದೆ ಅಚ್ಚಣ್ಣ ಶೆಟ್ಟಿಯವರು ಇಚ್ಚಾಮರಣವನ್ನಪ್ಪಿದ ನಂತರ ತಮ್ಮ 11ನೇ ವರ್ಷ ವಯಸ್ಸಿನಲ್ಲೇ ತಾತ ರಾಜಮನೆತನದ ಮಂಜಯ್ಯ ಪೆರ್ಗಡೆ (ತಾಯಿಯ ತಂದೆ) ಯವರ ಮನೆ ಸೇರಿ, ಪ್ರಾಥಮಿಕ ಶಿಕ್ಷಣ ಪೂರೈಸಿದರು. ಆದರೆ ಕೆಲವೇ ವರ್ಷಗಳಲ್ಲಿ ಅಪ್ಪ ಅಮ್ಮ, ಅಜ್ಜ ಅಜ್ಜಿ ಎಲ್ಲರನ್ನೂ ಕಳೆದುಕೊಂಡು ಅನಾಥರಾದರು. ಮಾತೃವಂಶೀಯ ಪದ್ಧತಿಯಂತೆ ಸಹೋದರ ಸಹೋದರಿಯರೊಂದಿಗೆ 1904ರಲ್ಲಿ ಮತ್ತೆ ತಮ್ಮ ಮನೆಗೆ ಬಂದು ನೆಲೆಸಿ, ಎಲ್ಲರ ಜವಾಬ್ದಾರಿಯನ್ನು ಹೊತ್ತು ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದರು. ಕನ್ನಡಕ್ಕೆ. ಅಳಿಯಕಟ್ಟಿನ ವಿವರಗಳನ್ನು ಅಧ್ಯಯನ ಮಾಡಿ, ’ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯನ ಕಟ್ಟು’ ಪುಸ್ತಕವನ್ನು 1915ರಲ್ಲಿ ಪ್ರಕಟಿಸಿದ್ದು, ಇದು ತುಳುನಾಡಿನ ಬಗ್ಗೆ ಕನ್ನಡದಲ್ಲಿ ಬರೆದ ಮೊದಲ ಸಂಶೋಧನಾ ಗ್ರಂಥವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾರುಣ್ಯದಲ್ಲಿಯೇ ಸ್ವಾತಂತ್ರ ಹೋರಾಟದಲ್ಲೂ ಧುಮುಕಿದರು. ಗಾಂಧೀಜಿಯವರ ಪ್ರಭಾವ ಅವರ ಮೇಲಾಗಿತ್ತು. ಹರಿಜನೋದ್ಧಾರ, ಮದ್ಯಪಾನ ನಿಷೇಧ ಚಳವಳಿ, ಚರಕದಿಂದ ನೂರು ತೆಗೆಯುವುದು ಹೀಗೆ ಹಲವು ನಿಟ್ಟಿನಿಂದ ಜನಸೇವೆಯಲ್ಲಿ ತೊಡಗಿದ್ದರು. ಜೈಲಿನಲ್ಲಿ ಮಿತ್ರ ನಾರಾಯಣ ಕಿಲ್ಲೆಯವರು ಹಂಚಿಕೊಂಡ ಅನುಭವದಿಂದ ’ಪ್ರಾಚೀನ ತುಳುನಾಡು’ ಹೊರಬಂತು. ಕಿಲ್ಲೆಯವರು ಹೇಳಿದ ಕಥೆ ’ಮಿತ್ಯನಾರಾಯಣ’ ಕಾದಂಬರಿ ಬರೆಯಲು ಪ್ರೇರಣೆ ನೀಡಿತು. ಶೀನಪ್ಪ ಹೆಗ್ಗಡೆಯವರು ’ತುಳುನಾಡ್’ ಎಂಬ ಕೈಬರಹದ ಪತ್ರಿಕೆಯನ್ನು ಪ್ರಕಟಿಸಿದ್ದು, ಆ ಕಾಲಕ್ಕೆ ಜಿಲ್ಲಾ ಪ್ರದರ್ಶನದಲ್ಲಿ ಸುವರ್ಣ ಪದಕ ಗಳಿಸಿತ್ತು.

’ಪುಳಿನಪುರ ದೇವಿಮಹಿಮೆ’ ಹಾಗೂ ಪುಳಿನಾಪುರ ಮಹಾತ್ಮೆ’ ಎಂಬ ತುಳುನಾಡಿನ ಸ್ಥಳಪುರಾಣಗಳ ಬಗೆಗೆ ಬರೆದಿರುವ ಪ್ರಥಮ ಸ್ಥಳ ಪುರಾಣವಿದು.  ಶಿನಪ್ಪ ಹೆಗ್ಗಡೆಯವರ ಖಂಡ ಕಾವ್ಯ- ’ಬಲಿಚಕ್ರವರ್ತಿಯ ಕಥೆ’ ಎಂಬ ಪುರಾಣ ಕಥೆ ಪ್ರಮುಖವಾಗಿದೆ. 1912ರಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿಸಿಕ್ಕ ಸಂಸ್ಕೃತ ಶ್ಲೋಕದ ಆಧಾರದಿಂದ ಸ್ಪೂರ್ತಿಗೊಂಡು ಒಂದು ಹೊಸ ಲಿಪಿಯ ಆವಿಷ್ಕಾರವನ್ನು ಮಾಡಿ ‘ನವ ನವಾಂಕ ಶ್ರೀನಿವಾಸ ಲಿಪಿ’ ಎಂಬ ಹೆಸರಿನಲ್ಲಿ ಮುದ್ರಿಸಿ ಪ್ರಕಟಗೊಳಿಸಿದರು. ಅಲ್ಲದೆ , 1931ರಲ್ಲಿ 115 ಪುಟಗಳ ’ಮಿತ್ಯ ನಾರಾಯಣ ಕಥೆ’ ಪ್ರಥಮ ತುಳು ಕಾದಂಬರಿ ರಚಿಸಿದ್ದಾರೆ. ‘ಪ್ರಭಾವತಿ ಮದ್ಮೆ’ ಎಂಬ ನಾಟಕ ಹಾಗೂ ’ರತ್ನಾವತಿ ಕಲ್ಯಾಣೊ’ ಎಂಬ ಯಕ್ಷಗಾನವನ್ನು ರಚಿಸಿದ್ದಾರೆ.

ಅಮ್ಮುಂಜೆ ಶೀನಪ್ಪ ಹೆಗ್ಗಡೆ

(08 Aug 1890)