About the Author

ಲೇಖಕ ಅಮೃತೇಶ್ವರ ತಂಡರ ಅವರು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯವರು. ತಂದೆ ಉಮ್ಮಣ್ಣ ತಂಡರ, ತಾಯಿ- ಬಸವಣ್ಣೆವ್ವ. ಪ್ರಾರಂಭಿಕ ಶಿಕ್ಷಣವನ್ನು ಅಣ್ಣಿಗೇರಿಯಲ್ಲಿ ಪಡೆದ ಅವರು ಕಾಲೇಜು ಶಿಕ್ಷಣವನ್ನು ಗದುಗಿನಲ್ಲಿ ಆರಂಭಿಸಿದರು. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಬಿ.ಎಡ್ ಪದವಿ ಪಡೆದರು. ಜೊತೆಗೆ ಹಿಂದಿ ಭಾಷೆಯಲ್ಲಿ ಎಚ್.ಎಸ್.ಎಸ್ (ಎಂ.ಇಡಿ), ಧಾರವಾಡದ ಮಲ್ಲಸರ್ಜನ ದೈಹಿಕ ಕಾಲೇಜಿನಿಂದ ಸಿಪಿ.ಎಡ್, ವಿಜಯ ಕಲಾಮಂದಿರದಿಂದ ಡಿಟಿಸಿ, ಗುಜರಾತ್ ಕಾಲೇಜಿನಿಂದ ಎನ್.ಎಫ್.ಸಿ, ಹೀಗೆ ಹಲವಾರು ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಪಡೆದಿದ್ದಾರೆ.

ಹುಲಕೋಟಿಯಲ್ಲಿನ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ, ನಿವೃತ್ತಿಯಾದರು. ನಂತರವೂ ಸ್ಥಳೀಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲ ಕಾಲ ಸೇವೆ ಸ;ಲ್ಲಿಸಿದರು.

ನಸುಕುನಕ್ಕಿತು, ಹಾಡು ಬಾ ಕೋಗಿಲೆ, ಎದೆಯಾಳದ ಮುತ್ತುಗಳು, ಹನಿಚೇತನ, ಕಡಲ ಹಕ್ಕಿಯ ಕನಸುಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅವರ ಲೇಖನ, ಕವಿತೆಗಳು ಪ್ರಕಟಗೊಂಡಿವೆ. ಅಣ್ಣಿಗೇರಿಯ ಪಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿದ್ದರು. ಚಿತ್ರಕಲೆ ರಂಗೋಲಿ, ಛಾಯಾಚಿತ್ರಣ, ಸಂಗೀತ, ಸಾಹಿತ್ಯ ರಚನೆ, ಅಂಚೆ ಚೀಟಿ ಸಂಗ್ರಹ, ಹಸ್ತಾಕ್ಷರ ಸಂಗ್ರಹ ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ. ಸಾಹಿತ್ಯಕ್ಷೇತ್ರದ ಸೇವೆಗಾಗಿ ಜಯತೀರ್ಥ ಕನಕಗಿರಿ ಪ್ರಶಸ್ತಿ, ಶ್ರೀರಂಗ ಪ್ರಕಾಶನ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಹು.ಧಾ. ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂಬಯಿ ಕನ್ನಡಿಗರ ಸಂಘ ಪ್ರಶಸ್ತಿ, ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

ಅಮೃತೇಶ್ವರ ತಂಡರ

(09 Nov 1943)