About the Author

ಅಂದಯ್ಯ ಅರವಟಗಿಮಠ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಡಂಬಳ ಸಮ್ಮತ ಹಡಗಲಿಯಲ್ಲಿ ಜುಲೈ 26, 1993ರಂದು ಜನಿಸಿದರು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಬೆಳಗಾವಿಯ ಸರ್ಕಾರಿ ಸದಾರ್ಸ್ ಪದವಿ ಪೂರ್ವ ಮಹಾವಿದ್ಯಾಲಯ, ಪದವಿ ಶಿಕ್ಷಣವನ್ನು ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಗದಗ, ಸ್ನಾತಕೋತ್ತರ ಪದವಿಯನ್ನು ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿಯವರ ಮಾರ್ಗದರ್ಶನದಲ್ಲಿ ‘ಕನ್ನಡ ವಚನ ವಿಮರ್ಶೆಗಳ ತಾತ್ವಿಕ ನೆಲೆಗಳು’ ಎಂಬ ವಿಷಯದ ಕುರಿತಾದ ಅಧ್ಯಯನವನ್ನು ಪೂರ್ಣಕಾಲಿಕವಾಗಿ ಕೈಗೊಂಡು ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.

ಸದ್ಯ ಗದುಗಿನ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ನುಡಿಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದ ಅಪ್ಪಟ ವಿದ್ಯಾರ್ಥಿಯಾಗಿ ಕಥೆ, ಲಲಿತಪ್ರಬಂಧ, ವಿಮರ್ಶೆ, ಸಂಶೋಧನೆಗಳತ್ತ ಹೆಚ್ಚು ಆಸಕ್ತರು. ‘ನೀರೆಲ್ಲವೂ ತೀರ್ಥ’ ಪ್ರಕಟಿತ ವಿಮರ್ಶಾ ಸಂಕಲನ. ಅಕ್ಷರ ಸಂಗಾತ ಕಥಾ ಪ್ರಶಸ್ತಿ ಪುರಸ್ಕೃತರು ಕೂಡ. ಕನ್ನಡದ ಪ್ರಮುಖ ಪತ್ರಿಕೆ, ಸಾಹಿತ್ಯದ ಜಾಲತಾಣಗಳಲ್ಲಿ ಇವರ ಹಲವು ಬರೆಹಗಳು ಪ್ರಕಟಗೊಂಡಿವೆ. ಹಾಡು, ಕೃಷಿ, ಸಂಚಾರ, ಸಿನಿಮಾ, ಅಧ್ಯಾಪನ ಇನ್ನೀತರ ಇಷ್ಟಗಳು.

ಅಂದಯ್ಯ ಅರವಟಗಿಮಠ

(26 Jul 1993)