About the Author

ವಕೀಲ ವೃತ್ತಿಯೊಂದಿಗೆ ಅಂಕಣಗಳನ್ನು ಬರೆಯುತ್ತಾ, ಕಾನೂನಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿರುವ ಅಂಜಲಿ ರಾಮಣ್ಣ ಅವರು ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಮಾನವ ಹಕ್ಕುಗಳು ವಿಷಯದಡಿ ಸ್ನಾತಕೋತ್ತರ ಕಾನೂನು ಪದವೀಧರರಾಗಿರುವ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಡಿಪ್ಲೊಮಾ, ಆಪ್ತ ಸಮಾಲೋಚನೆ ಮತ್ತು ಮಕ್ಕಳ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದಾರೆ.

ಮಹಿಳೆ ಹಾಗೂ ಮಕ್ಕಳ ಹಕ್ಕುಗಳು, ಶಿಕ್ಷಣ, ಕಾನೂನು, ಆರ್ಥಿಕ ಪ್ರಗತಿಗೆ ನೆರವು ಮತ್ತು ಎಚ್.ಐ.ವಿ.ಪೀಡಿತ ಮಹಿಳೆಯರ ಸಮೂಹದಲ್ಲಿ ಜಾಗೃತಿ ಮೂಡಿಸಲು ಹೋರಾಡುತ್ತಿರುವ ಅಂಜಲಿ ರಾಮಣ್ಣ, ಕರ್ನಾಟಕ ಸರ್ಕಾರದ ಬಾಲಕಿಯರ ಕಲ್ಯಾಣ ಸಮಿತಿಯ (ಬೆಂಗಳೂರು ನಗರ ವ್ಯಾಪ್ತಿ) ಅಧ್ಯಕ್ಷರೂ ಆಗಿದ್ದಾರೆ. ಮಹಿಳೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಸುಮಾರು 350ಕ್ಕೂ ಆಧಿಕ ಹಾಗೂ ಸಮಾಜದ ವಿವಿಧ ಸಮಸ್ಯೆಗಳ ಕುರಿತು 250ಕ್ಕೂ ಅಧಿಕ ಲೇಖನಗಳು ಮತ್ತು 100 ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಮಹಿಳೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ. ‘ಏಷ್ಯಾದ ದಕ್ಷಿಣ-ಪೂರ್ವ ಭಾಗದಲ್ಲಿ ಕೌಟುಂಬಿಕ ಹಿಂಸೆ’ ಕುರಿತು ಸಂಯುಕ್ತ ರಾಷ್ಟ್ರಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಸರ್ಕಾರಿ ಸೇವೆಯಲ್ಲಿಯ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಕುರಿತು (ಅಕ್ಕಮಹಾದೇವಿ ವಿ.ವಿ) ಹಾಗೂ ಜಾಗತೀಕರಣ ಹಾಗೂ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ (ಕರ್ನಾಟಕ ರಾಜ್ಯ ಮಹಿಳಾ ಆಯೋಗ) ಮತ್ತು ಕಾನೂನು -ಮನಶಾಸ್ತ್ರದ ವಿವಿಧ ಜರ್ನಲ್ ಗಳಲ್ಲಿ ಮಹತ್ವದ ಕೆಲ ಪ್ರಬಂಧಗಳನ್ನು ಬರೆದಿದ್ದಾರೆ.

ಗಗನಸಖಿ, ಜೀನ್ಸ್ ಟಾಕ್ ಹಾಗೂ ತಂತಾನೆ-ವಿವಿಧ ಕನ್ನಡ ಪತ್ರಿಕೆಗಳಲ್ಲಿ ಬರೆದ ಅಂಕಣಗಳ ಶೀರ್ಷಿಕೆಗಳು. ಲೀಗಲೀ ಯುವರ್ಸ-ಆಂಗ್ಲ ಪತ್ರಿಕೆಗೆ ಬರೆದ ಅಂಕಣದ ಶೀರ್ಷಿಕೆ. ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ಜಾಗೃತಿ ಮೂಡಿಸಲು ಅವರು ‘ನಾನು ಯಾಕೆ ಬೇಡ’ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ-ಶೀರ್ಷಿಕೆಯ ಸಾಕ್ಷ್ಯಚಿತ್ರವು ಭಾರತೀಯ ಏಳು ಭಾಷೆ ಸೇರಿದಂತೆ ನೇಪಾಳಿಯ ಭಾಷೆಯಲ್ಲಿ ಚಿತ್ರೀಕರಣಗೊಂಡಿದೆ. ಮೈಸೂರಿಗೆ ಬಾರದ ಸ್ವಾತಂತ್ಯ್ರ, ದೃಷ್ಟಿಹೀನರು, ಏನಾದರಾಗಲಿ ಮುಂದೆ ಸಾಗು, ಸಿದ್ಧ ಉಡುಪು ತಯಾರಿಕಾ ವಲಯದ ಮಹಿಳಾ ಕಾರ್ಮಿಕರ ಪರವಾಗಿ ‘ಬನ್ನಿ ಹೋರಾಡೋಣ’, ಬಾಲ್ಯ ವಿವಾಹ ತಡೆಯೋಣ ಹೀಗೆ ವಿವಿಧ ವಲಯದಲ್ಲಿಯ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುವ ಹಲವು ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಈ ಕುರಿತು ದೂರದರ್ಶನದಲ್ಲೂ ಪ್ರಚಾರ-ಪ್ರಸಾರ ಕೈಗೊಂಡಿದ್ದಾರೆ. ಓ ಸಖಿಯಾಗಿ ಹಾಗೂ ಹಲೋ ಗೆಳತಿ ವಾರಪತ್ರಿಕೆಗಳ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ದೂರದರ್ಶನ ಹಾಗೂ ಬಾನುಲಿಯಲ್ಲಿ ಹಲವು ನಾಟಕಗಳನ್ನು ಬರೆದು ನಿರ್ದೆಶನ ಮಾತ್ರವಲ್ಲ ನಟಿಸಿದ್ದಾರೆ.

ಕಾಯುವೆಯಾ ಕಾಲ (ಕವನ ಸಂಕಲನ), ರಷೀತಿಗಳು (ಪ್ರಬಂಧಗಳ ಸಂಕಲನ), ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ‘ಚೌಕಟ್ಟು’ -ಕೃತಿ, ಭ್ರೂಣ ಹತ್ಯೆ ವಿರೋಧದ ‘ಹೂವಿನ ಹಾಡು’-ಕೃತಿ, ಅರುಣಾಚಲದ ಪ್ರವಾಸ ಕಥನ-ಬೆಳಕಿನ ಸೆರಗು-ಇವರ ಸಾಹಿತ್ಯಕ ಕೃತಿಗಳು. ಇಂದಿರಾ ಪ್ರಿಯದರ್ಶಿನಿ ಮಹಿಳಾ ಸಾಧಕಿ, ಕಮಲಾ ರಾಮಸ್ವಾಮಿ ದತ್ತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರವಾಸ, ಅಡುಗೆ ಮಾಡುವುದು, ವೀಣೆ ನುಡಿಸುವುದು ಸೇರಿದಂತೆ ರಾಜಕೀಯ ವಿದ್ಯಮಾನಗಳಲ್ಲಿ ಇವರಿಗೆ ತೀವ್ರ ಆಸಕ್ತಿ.

ಅಂಜಲಿ ರಾಮಣ್ಣ