About the Author

ಲೇಖಕ ಭಾಲಚಂದ್ರಘಾಣೀಕರ್ ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರೀಕೋಟೆಯಲ್ಲಿ. ತಂದೆ-ವೆಂಕಟರಾಯರು, ತಾಯಿ-ಲಕ್ಷ್ಮೀಬಾಯಿ.ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ತೆರೆದರು. ಅದೇ ಶಾಲೆಯಲ್ಲಿ ಭಾಲಚಂದ್ರ ಮತ್ತು ಇವರ ತಮ್ಮನ ವಿದ್ಯಾಭ್ಯಾಸ ಪ್ರಾರಂಭವಾಯಿತು. ಆದರೆ ಸರಕಾರದಿಂದ ನೆರವು ದೊರೆಯದೆ ಶಾಲೆ ನಿಂತು ಹೋಯಿತು. ನಂತರ ಭಾಲಚಂದ್ರರು ಹುಬ್ಬಳ್ಳಿಯ ರಾಷ್ಟ್ರೀಯ ಶಾಲೆಗೆ ಸೇರಿದರು. ಅಲ್ಲಿ ಬಡಗಿತನ ಕಲಿತರು. ಕಾಲಿಗೆ ಉಳಿ ಏಟು ತಗುಲಿ ಶಾಲೆಗೆ ಶರಣು ಹೇಳಿ ಮತ್ತೆ ಶಾಲೆಗೆ ಸೇರಿದ್ದು ಧಾರವಾಡದ ರಾಷ್ಟ್ರೀಯ ಶಾಲೆ. ಅಲ್ಲಿ ಹೊಸಕೆರೆ ಚಿದಂಬರಯ್ಯನವರು ಪಾರಮಾರ್ಥಕ ವಿಷಯ ಬೋಧಿಸಿದರೆ, ಸಹ ಪ್ರಬುದ್ಧೆಯವರು ಬೋಧಿಸುತ್ತಿದ್ದುದು ಸಂಸ್ಕೃತಿ. ಇವರ ಜೊತೆ ಪಾಠ ಕಲಿಸಲು ಬರುತ್ತಿದ್ದ ಇತರ ಉಪಾಧ್ಯಾಯರೆಂದರೆ ದ.ರಾ. ಬೇಂದ್ರ, ಸಾಲಿ ರಾಮಚಂದ್ರರಾವ್, ಶ್ರೀಧರ ಖಾನೋಳಕರ್, ಬೆಟಗೇರಿ ಕೃಷ್ಣ ಶರ್ಮ, ನಾರಾಯಣಶರ್ಮ, ಶಂಬಾ ಜೋಶಿ ಮುಂತಾದವರು ಪಠ್ಯ ವಿಷಯಗಳನ್ನು ಬೋಧಿಸಿದರೆ ಆರ್.ಆರ್. ದಿವಾಕರ್‌, ಆಲೂರ ವೆಂಕಟರಾವ್, ಮುದವೀಡು ಕೃಷ್ಣರಾವ್ ಮುಂತಾದವರು ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ ಕುರಿತು ಭಾಷಣಗಳನ್ನು ಮಾಡಿ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗುವಂತೆ ಸ್ಫೂರ್ತಿ ತುಂಬುತ್ತಿದ್ದರು. ಕೈಬರಹದ ಪತ್ರಿಕೆಗಳ ಕಾಲದಲ್ಲಿ ಮೇವುಂಡಿ ಮಲ್ಲಾರಿಯವರು ಪ್ರೌಢರಿಗಾಗಿ ‘ಕರ್ನಾಟಕ ದೇವಿ’ ಎಂಬ ಪತ್ರಿಕೆಯನ್ನು ಹೊರತಂದಾಗ ಇವರು ಕಿರಿಯರಿಗಾಗಿ ತಂದ ಪತ್ರಿಕೆ ‘ಭಾರತ ಮಾತೆ’.

ಇಂಗ್ಲಿಷ್ ಕಲಿಯಲು ಧಾರವಾಡ ವಿಕ್ಟೋರಿಯಾ ಹೈಸ್ಕೂಲು ಪ್ರವೇಶ ಪಡೆದರು. 5ನೇ ಇಯತ್ತೆಯಿಂದ ಇಂಗ್ಲಿಷ್ ಕಲಿಕೆ ಆರಂಭಿಸಿದ ಅವರ ಅರ್ಥವಾಗದ ಭಾಷೆಯಾದ ಎರಡು ವಿಷಯಗಳಲ್ಲಿ ನಾಪಾಸಾದರು. ಆದರೆ ಡ್ರಾಯಿಂಗ್ ತರಗತಿಯಲ್ಲಿ ಆಸಕ್ತಿ ತೋರಿದ ಅವರು ಶಾಲೆ ಬಿಟ್ಟನಂತರ ಬೋರ್ಡ್ ಬರೆಯುವ ಕೆಲಸ, ಪತ್ರಿಕೆ ಹಂಚುವ ಕೆಲಸದ ಜೊತೆಗೆ ದೇಸಿ ವಸ್ತುಗಳಾದ ಮಸಾಲೆ ಪುಡಿ, ದಂತಚೂರ್ಣ ಮಾರಾಟ, ಬೇಕರಿ ತೆರೆದು ಹೊಟೇಲುಗಳಿಗೆ ಬಿಸ್ಕೀಟು ಮಾರಾಟ ಮಾಡಿದರು. 1930 ರಲ್ಲಿ ನಾಡಿನಾದ್ಯಂತ ಸತ್ಯಾಗ್ರಹದ ರಣಭೇರಿ ಹಬ್ಬಿ ಸ್ವಯಂ ಸೇವಕನಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸೇರ್ಪಡೆಯಾದರು. ‘ಗಾಂಧಿ ಹುಚ್ಚು’ ಎಂಬ ಕತೆ ಬರೆದರು.

ಅಂಕೋಲೆಯ ರೈತರ ಚಳವಳಿಯಲ್ಲಿ ರೈತರಿಗೆ ಪರಿಹಾರ ಸಿಕ್ಕ ನಂತರ ಬಾಲಚಂದ್ರರು ಧಾರವಾಡಕ್ಕೆ ವಾಪಸ್ಸಾದರು. ’ಸಮಾಜೋನ್ನತಿ ಪುಸ್ತಕ ಮಾಲೆ’ ಅಡಿಯಲ್ಲಿ ಒಂದಾಣೆ ಪುಸ್ತಕ ಪ್ರಕಟಿಸಿದರು. ‘ಗಾಂಧಿ ಹುಚ್ಚು’ ಕತೆಯ ಎಂಟು ನೂರು ಪ್ರತಿ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದರು. ಕರನಿರಾಕರಣೆಯ ಚಳವಳಿಯನ್ನಾಧರಿಸಿ ರಚಿಸಿದ ನಾಟಕ ‘ರೈತರ ಭಾಗ್ಯೋದಯ’ ಮತ್ತು ‘ನಾನೇ ಹೊಲೆಯ’ ಎಂಬ ಕತೆಗಳು ಪ್ರಕಟವಾದವು. ಅವರ ‘ರೈತರ ಭಾಗ್ಯೋದಯ’ ರಾಜದ್ರೋಹದ ಪುಸ್ತಕವೆಂದು ನಿಷೇದಿಸಲಾಯ್ತು. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ನಿಷೇದಾಜ್ಞೆ ತೆರವುಗೊಳಿಸಿದರು. ತರುಣ ಕರ್ನಾಟಕ ಪತ್ರಿಕೆಯವರು ಏರ್ಪಡಿಸಿದ್ದ ಹರಿಜನೋದ್ಧಾರದ ಬಗ್ಗೆ ‘ಅಸ್ಪೃಶ್ಯದೇವ’ ಎಂಬ ನಾಟಕ ರಚಿಸಿ ಬಹುಮಾನ ಪಡೆದರು. ಇದರಿಂದ ಪ್ರೇರಿತರಾಗಿ ಸಮಾಜೋನ್ನತಿ ಪುಷ್ಪಮಾಲೆಯಿಂದ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿದರು. ’ರಾಜಹಂಸ’ ಮತ್ತು ‘ಸದಾನಂದ’ ಎಂಬ ಪತ್ರಿಕೆಗಳಲ್ಲಿ ಕೆಲಕಾಲ ಉಪಸಂಪಾದಕರ ಹುದ್ದೆ. ನಂತರ ತಾವೇ ಪ್ರಾರಂಭಿಸಿದ ‘ಸಮಾಜ’ (1935) ಎಂಬ ಮಾಸಿಕ ಪತ್ರಿಕೆಯಲ್ಲಿ ದುಡಿದರು.

‘ಅಭ್ಯುದಯ’ ಎಂಬ ವಾರಪತ್ರಿಕೆಯನ್ನೂ ಪ್ರಾರಂಭಿದರು.  ಸ್ವತಂತ್ರ ಮುದ್ರಣ ಯಂತ್ರದ ಅನುಕೂಲದಿಂದ ಪತ್ರಿಕೆಯ ಮುದ್ರಣದ ಜೊತೆಗೆ ಮುದ್ರಣ ಕಾಗದ ವ್ಯಾಪಾರ ಆರಂಭಿಸಿದರು. ಈ ಮುದ್ರಣ ಕಾಗದದ ಮಾರಾಟದ ವ್ಯವಸ್ಥೆಗಾಗಿ ‘ಸಮಾಜ ಪೇಪರ್ ಮಾರ್ಟ್’ ಸ್ಥಾಪಿಸಿದರು. ನಂತರದಲ್ಲಿ ಇದು ‘ಸಮಾಜ ಪುಸ್ತಕಾಲಯ’ ಎಂಬ ಹೆಸರು ಪಡೆಯಿತು. ಸಮಾಜ ಪುಸ್ತಕಾಲಯದಿಂದ ಪ್ರತಿಭಾ ಎಂಬ ಮಾಸಪತ್ರಿಕೆಯ ಆರಂಭಿದರು. ಮುಂದೆ ಧಾರವಾಡದ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾದರು.  ಪ್ರತಿಭಾ ಪ್ರಕಾಶನದಡಿಯಲ್ಲಿ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ಮೇವುಂಡಿ ಮಲ್ಲಾರಿ, ಗುರುನಾಥ ಜೋಶಿ, ಶ್ರೀಕೃಷ್ಣ ಕುಲಕರ್ಣಿ, ಸ.ಪ. ಗಾಂವಕರ  ಪುಸ್ತಕಗಳನ್ನು ಹೊರ ತಂದಾಗ ದೇವುಡು ಅವರ ‘ಘಾಟಿ ಮುದುಕ’ ಪುಸ್ತಕದಿಂದಲೇ ಗ್ರಂಥಮಾಲೆ ಆರಂಭವಾದುದು. ನಾನೇ ಹೊಲೆಯ, ಸನಾತನೀಸೂಳೆ, ಬಂಗಾರದ ಹೊಗೆ, ಕಲಿತ ಹೆಂಡತಿ ಸೇರಿದಂತೆ 12 ಕತೆಗಳು, ಗಾಂಧಿ ಟೋಪಿ, ಬಡವರ ರೊಟ್ಟಿ, ರೈತರ ಭಾಗ್ಯೋದಯ, ಮುಂತಾದ ಏಕಾಂಕ ನಾಟಕಗಳು; ಶ್ಯಾಮನ ತಾಯಿ, ಪ್ರತಿಬಿಂಬ ಮೊದಲಾದ ಅನುವಾದಗಳು; ಗುಡಿಗುಡಿಯ ರಹಸ್ಯ, ಲೋಕಮಾನ್ಯ ಟಿಳಕ, ಸ್ವಾಮಿ ರಾಮತೀರ್ಥ, ಲಾಲಾಲಜಪತರಾಯ್ ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳು; ಗಾಂಧಿ ದರ್ಶನ ಎಂಬ ಸಾಕ್ಷ್ಯಚಿತ್ರ ಮತ್ತು ಇತರ ಲೇಖಕರೊಡನೆ ರಚಿಸಿದ ಆಜಾದ್ ಹಿಂದ್ ಮತ್ತು ಬಿರುಗಾಳಿ ಎಂಬ ಕೃತಿಗಳು ಸೇರಿದಂತೆ 24 ಕೃತಿಗಳನ್ನು ರಚಿಸಿದ್ದಾರೆ.

ಇವರ ಮಕ್ಕಳಾದ ಮನೋಹರ ಘಾಣೀಕರ್ ಮತ್ತು ರವೀಂದ್ರ ಘಾಣೀಕರ್ ನೇತೃತ್ವದಲ್ಲಿ ಪ್ರಕಾಶನ ಸಂಸ್ಥೆಯು ಮುನ್ನಡೆಯುತ್ತಿದ್ದು ಸುಮಾರು 50ಕ್ಕೂ ಹೆಚ್ಚು ಪ್ರಕಾರಗಳಲ್ಲಿ 1450 ಪುಸ್ತಕಗಳನ್ನು ಪ್ರಕಟಿಸಿದ್ದು ದಾಖಲೆ. ಸಾಹಿತ್ಯ ಪರಿಚಾರಕ, ಸಾಹಿತಿ ಭಾಲಚಂದ್ರ ಘಾಣೀಕರ್ ರವರು 8-10-2004 ರಲ್ಲಿ ನಿಧನರಾದರು.

ಭಾಲಚಂದ್ರ ಘಾಣೀಕರ್

(03 Nov 1910-08 Oct 2004)