About the Author

ಸರಳ ಹಾಗೂ ಸಾದಾ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರಾಗಿದ್ದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಸದಾ ತನ್ನ ಸುತ್ತಲಿನ ಪರಿಸರದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಅವರು ಬರೆದದ್ದು ಇರಬೇಕಾದ ಆದರ್ಶದ ಬದುಕನ್ನಲ್ಲ, ಬದುಕೇ ಆದರ್ಶವಾಗುವ ಬಗೆಯನ್ನು. ಅವರ ಬರಣಿಗೆಯಲ್ಲಿ ಸಂಕೇತಗಳು, ಪ್ರತಿಮೆಗಳಾಗಿ, ಪ್ರತಿಮೆಗಳು ಸಂಕೇತಗಳಾಗಿ, ಕೆಲವೊಮ್ಮೆ ಎರಡನ್ನೂ ಮೀರಿದ ಶಕ್ತಿಯಾಗುವುದನ್ನು ಜೀವಾಕ್ಷರವಾಗುವುದನ್ನು ಕಾಣುತ್ತೇವೆ. 

ಗಾಂಧೀ, ವಿನೋಬಾ, ರಮಣ ಮಹರ್ಷಿ, ಪರಮಹಂಸ, ಜೆ.ಕೆ.ಮುಂತಾದವರಿಂದ ಪ್ರಭಾವಿತರಾಗಿದ್ದ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಳ್ಳಿಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಸಮಾಜಸೇವೆ ಮಾಡಿಕೊಂಡಿದ್ದರು. 

ಯೇಗ್ದಾಗೆಲ್ಲಾ ಐತೆ(ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ತುಂಬಿ (ಕವನ ಸಂಕಲನ), ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಪಾಶುಪತಾಸ್ತ್ರ(ನಾಟಕಗಳು), ಸಾಹಿತಿಗಳ ಸ್ಮೃತಿ , ಮರೆಯಲಾದೀತೆ, ಎಲೆಯಮರೆಯ ಆಲರು (ನೆನಪುಗಳು), ಇವು ಕೃಷ್ಣಶಾಸ್ತ್ರೀಗಳ ಕೆಲವು ಪ್ರಕಟಿತ ಕೃತಿಗಳು. 

ಸ್ವಾತಂತ್ರಪೂರ್ವ ಕಾಲದ ಎಲ್ಲಾ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾರ್ಥಕ ಜೀವನ ನಡೆಸಿದ ಕೃಷ್ಣಶಾಸ್ತ್ರೀಗಳು ನಿಸ್ಸಂದೇಹವಾಗಿಯೂ  ನಮ್ಮ ನಡುವಿದ್ದ ಅಪರೂಪದ ವ್ಯಕ್ತಿ. 

ರಾಜ್ಯ ಮತ್ತು ಕೇಂದ್ರ ಸರ್ಕಾರದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ. ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು. 

ಬೆಳಗೆರೆ ಕೃಷ್ಣಶಾಸ್ತ್ರಿ

(22 May 1916-23 Mar 2013)