About the Author

ಲೇಖಕ, ಚಿತ್ರಕಲಾವಿದ, ಕಲಾ ವಿಮರ್ಶಕ ಚಿ.ಸು. ಕೃಷ್ಣಸೆಟ್ಟಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ತಂದೆ ಸಿ.ಪಿ. ಸುಬ್ಬಯ್ಯಶೆಟ್ಟಿ, ತಾಯಿ ಸರೋಜಮ್ಮ. ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್ ಅಂಡ್‌ಕ್ರಾಫ್ಟ್ ನಿಂದ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮಾ ಪದವಿ ಪಡೆದ ಅವರು ಕೇಂದ್ರ ಲಲಿತ ಕಲಾ ಅಕಾಡಮಿಯ ಸ್ಕಾಲರ್ ಷಿಪ್‌ನಿಂದ ಗಾರಿ ಸ್ಟುಡಿಯೋದಲ್ಲಿ ಗ್ರಾಫಿಕ್‌ ಕಲೆಯಲ್ಲಿ ಪರಿಣತಿ ಪಡೆದರು. ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ಮಾಧ್ಯಮದಲ್ಲಿ ಕನ್ನಡ ಎಂ.ಎ. ಪದವಿಗಳಿಸಿದರು. ಆನಂತರ ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್‌ನಲ್ಲಿ ಉಪನ್ಯಾಸಕರಾಗಿ ಕ್ಲಾರಿಟಾನ್‌ ಜಾಹೀರಾತು ಕಂಪನಿಯಲ್ಲಿ ಕಲಾ ನಿರ್ದೇಶಕರಾಗಿ, ವಿನ್ಯಾಸ ಜಾಹೀರಾತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು. ‘ವರ್ಣಾವರಣ’ ಅವರ ಚಿತ್ರಕಲಾ ವಿಮರ್ಶಾ ಲೇಖನಗಳ ಸಂಕಲನ. 

ಫೆಸ್ಟಿವಲ್‌ ಆಫ್‌ ಇಂಡಿಯ – ಅಮೆರಿಕಾದ ಕಲೆ ಮತ್ತು ಸಾಂಸ್ಕೃತಿಕ ಉತ್ಸವ, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಲಾಸ್‌ಏಂಜಲೀಸ್‌ ಮುಂತಾದೆಡೆ ಅಂತರಾಷ್ಟ್ರಿಯ, ರಾಷ್ಟ್ರಿಯ ಮಟ್ಟದಲ್ಲಿಉದಯಪುರ, ಲಕ್ನೋ ಮುಂತಾದೆಡೆ ಹಲವು ಕಲಾಪ್ರದರ್ಶನಗಳನ್ನು ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ದೂರದರ್ಶನಕ್ಕಾಗಿ ಚಿತ್ರಾಂತರಂಗ, ಮರೀಚಿಕೆ, ನವಿಲುಗರಿ, ಸುಪ್ರಭಾತವಾಹಿನಿಗಾಗಿ ಜೀವನ; ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದ್ದ ಕೃಷ್ಣಸೆಟ್ಟಿ ಅವರು ಕನ್ನಡ ಸಂಸ್ಕೃತಿ ಇಲಾಖೆಗಾಗಿ 4 ಚಿಕ್ಕ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಜೊತೆಗೆ ರಸಪ್ರಶ್ನೆ ಕಾರ್ಯಕ್ರಮ ಸೇರಿದಂತೆ ಹಲವು ಪ್ರಸಿದ್ಧ ಕಾರ್ಯಕ್ರಮಗಳನ್ನೂ ನಿರ್ಮಾಣ ಮಾಡಿದ್ದರು. 2004ರಲ್ಲಿ ಅಮೆರಿಕದಿಂದ ಅಂತಾರಾಷ್ಟ್ರೀಯ ವ್ಯಕ್ತಿ, ದೆಹಲಿಯ ರಾಷ್ಟ್ರೀಯ ರತ್ನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಸಹ್ಯಾದ್ರಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳಿಗಳು ಲಭಿಸಿವೆ. 

ಚಿ.ಸು. ಕೃಷ್ಣಸೆಟ್ಟಿ

(17 Aug 1952)