About the Author

ಜನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಿ.ಕೆ. ರಾಜೇಂದ್ರ ಅವರು ಶಿಷ್ಟ ಸಾಹಿತ್ಯದಲ್ಲಿಯೂ ಗಮನಾರ್ಹ ಕೆಲಸ ಮಾಡಿದವರು. ರಾಜೇಂದ್ರ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದವರು. ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣವನ್ನು ದಂಡಿನ ಶಿವರದಲ್ಲಿ ಪಡೆದ ಅವರು ನಂತರ ಅರಕಲಗೂಡು ಮತ್ತು ಶಿರಾ ಪ್ರೌಢಶಾಲೆಗಳಲ್ಲಿ  ಪಡೆದರು. ಹಾಸನದ ಪ್ರಥಮ ದರ್ಜೆ ಕಾಲೇಜಿನಿಂದ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆರು. ಅವರು ಸಲ್ಲಿಸಿದ ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಕುರಿತ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ. ನೀಡಿದೆ.

ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸೇರಿದ ರಾಜೇಂದ್ರ ಅವರು ನಂತರ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಒಂಬತ್ತು ವಿಮರ್ಶಾ ಕೃತಿ ಪ್ರಕಟಿಸಿದ್ದಾರೆ. ‘ಜಾನಪದ ಸಮೀಕ್ಷೆ’, ಜಾನಪದ ಸಂಚಯ’, ‘ಜಾನಪದ ಸಮಾಲೋಕ’, ‘ಮುರಾವು’, ಜಾನಪದ: ಕೆಲವು ಗ್ರಹಿಕೆಗಳು, ಜಾನಪದ ಮತ್ತು ಶಿಷ್ಟಪದ, ಕರಪಾಲದವರು, ಜನಪದ ನಂಬಿಕೆಗಳು ಅವರ ಪ್ರಕಟಿತ ಕೃತಿಗಳು.

ಕರಪಾಲ ಮೇಳ, ಶಿಶು ಪ್ರಾಸಗಳು, ನಮ್ಮ ಸುತ್ತಿನ ನಂಬಿಕೆಗಳು, ಬೆದರು ಬೊಂಬೆ ಮತ್ತು ಇತರ ಜನಪದ ಕಥೆಗಳು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಜಾನಪದ ಸಾಹಿತ್ಯದ ಚಿಂತನೆ, ಸಂಪಾದನೆ, ವಿಮರ್ಶೆಗಳ ಜೊತೆಗೆ ಜಾನಪದ ಪತ್ರಿಕೆಗಳಾದ ಜಾನಪದ, ಜಾನಪದ ಜಗತ್ತು, ಮೂಡಲಪಾಯ, ಜಾನಪದ ಗಂಗೋತ್ರಿ ಮತ್ತು ಇಂಗ್ಲೀಷಿನಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ಫೋಕ್ಲೋರ್ ನ್ಯೂಸ್ ಲೆಟರ್, ಜರ್ನಲ್ ಆಫ್ ಇಂಡಿಯನ್ ಫೋಕ್ಲೋರಿಸ್ಟಸ್, ಪ್ರಸಾರಾಂಗ ಮತ್ತು ಎಫ್.ಎಫ್.ಐ ನ್ಯೂಸ್ ಬುಲೆಟಿನ್ ಮುಂತಾದ ಪತ್ರಿಕೆಗಳ ಹುಟ್ಟು, ಬೆಳವಣಿಗೆ, ಸ್ವರೂಪ ಕುರಿತ ವಿವರಣಾತ್ಮಕ ವಿಶ್ಲೇಷಣೆ ನೀಡಿದ್ದಾರೆ.

ಮಾತಿನ ಮಲ್ಲರು, ದೇವಗಂಗೆ, ಘಟನೆಗಳು, ನಸುನಗೆಯ ಅಲೆಗಳು, ನಿಜಸಲ್ಲಾಪ (ಪ್ರಬಂಧ ಸಂಕಲನ), ಪರೋಪಕಾರಿ, ಅಮೃತವರ್ಷ, ಕಾವ್ಯ ಗಂಗೋತ್ರಿ, ಕಾವ್ಯ ಸಂಗಮ, ಟಿ. ಮರಿಯಪ್ಪನವರು ಮತ್ತು ನುಗ್ಗೇಹಳ್ಳಿ ಗುಜ್ಜೇ ಗೌಡರು (ಗ್ರಂಥ ಸಂಪಾದನೆ). ಶಿಷ್ಟ ಹಾಗೂ ಜಾನಪದ ಕ್ಷೇತ್ರಗಳೆರಡರಲ್ಲೂ ಸಾಹಿತ್ಯ ಕೃಷಿ ಮಾಡಿರುವ ಅವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಡಾಮಿಯ ಜಾನಪದ ತಜ್ಞ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ’ಸಾಹಿತ್ಯ ಶ್ರೀ ಹಾಗೂ ಎರಡು ಬಾರಿ ಪುಸ್ತಕ ಬಹುಮಾನ ಪಡೆದಿದ್ದಾರೆ.

ಡಿ.ಕೆ.ರಾಜೇಂದ್ರ