About the Author

ದೇಶಹಳ್ಳಿ ಜಿ. ನಾರಾಯಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು.1923 ಸೆಪ್ಟೆಂಬರ್ 2 ರಂದು ಜನನ. ಸಾಹಿತ್ಯ, ಸಂಘಟನೆಯ ಜೊತೆಗೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಮದ್ದೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು. 1942ರಲ್ಲಿ `ಬ್ರಿಟಿಷರೇ’ ಭಾರತ ಬಿಟ್ಟು ತೊಲಗಿ ‘ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದರು. 1957ರಲ್ಲಿ ಬೆಂಗಳೂರು ಕಾರ್ಪೋರೇಷನ್ನಿನ ಕೌನ್ಸಿಲರ್ ಆಗಿದ್ದ ಇವರು 1964ರಲ್ಲಿ ಮೇಯರಾಗಿ ಚುನಾಯಿತರಾದರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್ ಪಕ್ಷದ ವಾರ್ತಾ ಪತ್ರದ ವ್ಯವಸ್ಥಾಪಕರಾದ ಇವರು ತಮ್ಮದೇ ಆದ ಸ್ವತಂತ್ರ ಮುದ್ರಣಾಲಯವನ್ನು ಬೆಂಗಳೂರು ಚಾಮರಾಜಪೇಟೆಯಲ್ಲಿ ಸ್ಥಾಪಿಸಿ ವಿನೋದ ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದರು. ಈಗಲೂ ಆ ಪತ್ರಿಕೆ ಪ್ರಕಟವಾಗುತ್ತಿದೆ. ಅನೇಕ ಸಂಘಸಂಸ್ಥೆಗಳ ಸ್ಥಾಪನೆಯಲ್ಲಿ ನಿರ್ವಹಣೆಯಲ್ಲಿ ಮಾರ್ಗದರ್ಶಕರಾಗಿದ್ದ ಇವರು ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

1962ರಿಂದ 1978ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣಕರ್ತರಾದರು. ಬೆಂಗಳೂರು ನಗರಪಾಲಿಕೆ ಮುಂದೆ ಕೆಂಪೇಗೌಡನ ಪ್ರತಿಮೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು. ಇವರ ಸಾರ್ವಜನಿಕ ಸೇವೆಗೆ ಸರ್ಕಾರ, ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಪ್ರಶಸ್ತಿ ನೀಡಿವೆ. 1972ರಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿ ಇವರಿಗೆ ದೊರೆತಿದೆ. ಇವರು ಅಕ್ಷರ ನೀವ್ ಕಲಿಯಿರಿ ಎಂಬ ಗೋವಿನ ಹಾಡಿನ ಧಾಟಿಯ 100 ಪದ್ಯಗಳ ಗ್ರಂಥವನ್ನು ಬರೆದಿದ್ದಾರೆ. ವಿನೋದ ಪತ್ರಿಕೆಯಲ್ಲಿ ಸಂಪಾದಕೀಯಗಳನ್ನು ಸೊಗಸಾಗಿ ಬರೆಯುತ್ತಿದ್ದರು. ಅವರ ಭಾಷಣಗಳೆಲ್ಲಾ ಲಿಖಿತರೂಪದಲ್ಲಿದ್ದು ಅದನ್ನು ಪ್ರಕಟಿಸಿದರೆ ಸೊಗಸಾದ ಉಪಯುಕ್ತ ಲೇಖನ ಸಂಗ್ರಹವಾಗುತ್ತದೆ. ಮುಖ್ಯವಾಗಿ ಜಿ.ನಾರಾಯಣರು ನಿಸ್ವಾರ್ಥ ಸಾರ್ವಜನಿಕ ಸೇವಾ ಧುರೀಣರಾಗಿದ್ದರು.

ಕೃತಿಗಳು: ಅಕ್ಷರವ ನೀವ್ ಕಲಿಯಿರಿ

ದೇಶಹಳ್ಳಿ ಜಿ. ನಾರಾಯಣ