About the Author

ಸಾಹಿತಿ ದೇವೇಂದ್ರಕುಮಾರ್‌ ಹಕಾರಿ ಅವರು ಜನಿಸಿದ್ದು 1931 ಏಪ್ರಿಲ್‌ 14ರಂದು. ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ ಗ್ರಾಮ ಇವರ ಹುಟ್ಟೂರು. ತಾಯಿ ಮಲ್ಲವ್ವ, ತಂದೆ ಸಿದ್ದಪ್ಪ. ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಜಾನಪದ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದರು. 

ಕಲಬುರ್ಗಿಯ ಶರಣ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ನಂತರ ಧಾರವಾಡದ ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಕೂಗುತಿವೆ ಕಲ್ಲು, ಚೆಲ್ವ ಕೋಗಿಲೆ (ಕಾದಂಬರಿ), ಚಿನ್ಮಯ, ಆಚೆ ಈಚೆ, ಬಿಡುಗಡೆ, ನನ್ನ ಸುತ್ತು (ಕವನ ಸಂಕಲನ), ಸಾಹಿತ್ಯ ಸಮ್ಮುಖ, ಕನ್ನಡ ಕಾವ್ಯಗಳಲ್ಲಿ ಕಿರಾತಾರ್ಜುನ ಪ್ರಸಂಗ, ಶಿವನ ಡಂಗುರ (ವಿಮರ್ಶೆ), ಚಾಟಿ, ಒರೆಗಲ್ಲು (ಕಥಾ ಸಂಕಲನ),  ಅಮೃತಮತಿ, ಶಾಕುಂತಲಾ, ಕ್ಷಿತಿಜದಾಚೆ, ಗೀತಶಿವ ಕಥಾ (ಗೀತನಾಟಕ) ಮುಂತಾದವು ಇವರ ಪ್ರಮುಖ ಕೃತಿಗಳು. 

ಹಕಾರಿ ಅವರಿಗೆ ಮೈಸೂರು ಸರ್ಕಾರದ ಬಹುಮಾನ, ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯಯೋಧ ಸನ್ಮಾನ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ದೇವೇಂದ್ರಕುಮಾರ್‌ ಅವರು 2007 ಏಪ್ರಿಲ್‌ 7ರಂದು ನಿಧನರಾದರು. 

ದೇವೇಂದ್ರಕುಮಾರ ಹಕಾರಿ

(14 Apr 1931-07 Apr 2007)