About the Author

ಲೇಖಕ ಜ್ಞಾನಾನಂದರು ಮೂಲತಃ ಚಿಕ್ಕಬಳ್ಳಾಪುರದ ನಂದಿ ಗ್ರಾಮದವರು. ತಂದೆ- ಎಂ.ಆರ್. ಜಿ. ಶಂಕರ್, ತಾಯಿ ಈಶ್ವರಮ್ಮ. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪಡೆದ ಜ್ಞಾನಾನಂದರು ಆನಂತರ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ’ ಎಂಬ ಮಹಾಪ್ರಬಂಧ ಮಂಡಿಸಿ, ಪಿ.ಎಚ್‌.ಡಿ. ಪಡೆದರು.

ಚೆನ್ನೈನ ದಕ್ಷಿಣ ಭಾರತ ಹಿಂದಿಸಭಾದಿಂದ ರಾಷ್ಟ್ರಭಾಷಾ ಪ್ರವೀಣ್‌, ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಸರ್ಟಿಫಿಕೇಟ್‌ (ಸ್ಟ್ಯಾಟಿಸ್ಟಿಕಲ್‌ ಅಪ್ಲೈಡ್‌ ಟು ಇಂಡಸ್ಟ್ರಿ), ಸೂಪರ್‌ವೈಸರಿ ಡೆವಲಪ್‌ಮೆಂಟ್‌ ಡಿಪ್ಲೊಮ ಮತ್ತು ಡಿಪ್ಲೊಮ ಇನ್‌ ಕ್ವಾಲಿಟಿ ಕಂಟ್ರೋಲ್‌ ಮುಂತಾದ ಕೆಲ ವೃತ್ತಿಪರ ಅಧ್ಯಯನಗಳನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಗಣತಿ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗಕ್ಕೆ ಸೇರಿದ ಅವರು ಕೋಲಾರದ ಆರ್.ಟಿ.ಓ. ಕಚೇರಿಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದರು. ನಂತರ ಬಿ.ಇ.ಎಂ.ಎಲ್‌. ಕಾರ್ಖಾನೆಯ ಯೋಜನಾ ಇಲಾಖೆಯಲ್ಲಿ ಮ್ಯಾನೇಜರ್ ಹುದ್ದೆಗೇರಿ ಮಹತ್ವದ ಸೇವೆ ಸಲ್ಲಿಸಿ 2000ರಲ್ಲಿ ನಿವೃತ್ತಿ ಹೊಂದಿದರು. 

ಶಾಲಾ ದಿನಗಳಿಂದಲೂ ಸಾಹಿತ್ಯದ ಆಸಕ್ತಿ ಹೊಂದಿದ್ದ ಅವರು ಕಾಲೇಜು ದಿನಗಳಲ್ಲೇ ಹಲವು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದರು. ಈ ಕಾದಂಬರಿಗಳು ಕಥಾವಳಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದವು. ಅವರ ಹಲವಾರು ಸಣ್ಣಕತೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲೆಲ್ಲಾ ಪ್ರಕಟವಾಗಿವೆ. ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜ್ಞಾನಾನಂದರು, ಇವರ ಪ್ರೇಮಗಂಗೆ ಎಂಬ ಕಥಾ ಸಂಕಲನದಲ್ಲಿ 30 ಕತೆಗಳಿವೆ. ಮಕ್ಕಳಿಗಾಗಿ ಆಕಾಶಯಾತ್ರೆ ಎಂಬ ಕೃತಿ ಹಾಗೂ ಸೂರ್ಯದೇವನ ಸಂಸಾರ, ರಾಕೆಟ್ ಮತ್ತು ಆಕಾಶನೌಕೆ, ಚಂದ್ರ ಮುಂತಾದ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. ವೇಮನ, ನಾಗಾರ್ಜುನ, ಆರ್ಯಭಟ ವ್ಯಕ್ತಿಚಿತ್ರಗಳು, ರಾಜೂರಾದ್ಧಾಂತ, ತ್ವಷ್ಟ್ರಬ್ರಹ್ಮ, ಕ್ಯಾಲೆಂಡರ್ ಕಥಾಸಂಕಲನ, ನಯನ, ಅನ್ನಪೂರ್ಣಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. 

ಜಿ. ಜ್ಞಾನಾನಂದ

(05 Jul 1940)