About the Author

ಕನ್ನಡಕ್ಕೆ ವಿಶಿಷ್ಟವೆನಿಸುವ ಕಥೆಗಳನ್ನು ಕೊಟ್ಟು ನವ್ಯ ಸಾಹಿತ್ಯ ಚಳವಳಿಗೆ ಹೊಸಕಳೆ ಜೋಡಿಸಿದ ಜಿ.ಎಸ್. ಸದಾಶಿವ ಅವರ ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಭಾರಂಗೀ ಹೋಬಳಿ ಗುಂಡಮನೆ, ತಂದೆ ಶ್ರೀಪಾದರಾಯರು, ತಾಯಿ ಲಲಿತಮ. ಅವರದು ಕೃಷಿಕ ಕುಟುಂಬ. ತಾಯಿಯ ತೌರೂರು ಗಿಂಡೀಮನೆಯಲ್ಲಿ ಸದಾಶಿವ ಜನಿಸಿದ್ದು 1939ರ ಸೆಪ್ಟೆಂಬರ್ 13ರಂದು. ಈಗ ಗುಂಡೂಮನೆಯೂ ಇಲ್ಲ: ಗಿಂಡೀಮನೆಯೂ ಇಲ್ಲ. ಶರಾವತಿ ನದಿಯ ಆ ದಂಡೆ, ಈ ದಂಡೆ ಊರುಗಳಾದ ಇವು ಶರಾವತಿ ಅಣಿಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿವೆ. ಊರ ಮಗ್ಗುಲ ಹಾಂಸೆ ಎಂಬಲ್ಲಿದ್ದ ಸರ್ಕಾರಿ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯಲ್ಲಿ ಅವರ ಪ್ರಾಥಮಿಕ ಶಿಕ್ಷಣ, ಸಾಗರ, ಶಿವಮೊಗ್ಗದಲ್ಲಿ ನಂತರದ ಶಿಕ್ಷಣ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ; ಮಾನಸಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದು 'ಸಂಯುಕ್ತ ಕರ್ನಾಟಕ' ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ. ಅಲ್ಲಿಂದ 'ಪ್ರಜಾವಾಣಿ'ಗೆ ಬಂದು 'ಸುಧಾ' ವಾರಪತ್ರಿಕೆ ಮತ್ತು 'ಮಯೂರ' ಮಾಸಪತ್ರಿಕೆಗಳಲ್ಲೂ ಕಾವ್ಯ ನಿರ್ವಹಿಸಿದರು. ಕನ್ನಡದಲ್ಲಿ ಸಾಂಸ್ಕೃತಿಕ ಪತ್ರಿಕೋದ್ಯಮ ಬೆಳೆಸಿದರು. ನಂತರದ ವರ್ಷಗಳಲ್ಲಿ ವೈಯೆನ್ನೆ ಅವರ ಜೊತೆ ಕನ್ನಡ ಪದ' ಪತ್ರಿಕೆಯಲ್ಲಿ ಸದಾಶಿವರ ಪತ್ರಿಕೋದ್ಯಮ ಸೇವೆ ಮುಂದುವರಿಯಿತು. ಮಗುವಾಗಿ ಬಂದವನು, ನಮ್ ಕೌಲಿ ಕಂಡಾ, ತುಣುಕುಗಳು- ಸದಾಶಿವರ ಕಥಾ ಸಂಕಲನಗಳು, ಇವೆಲ್ಲ 'ಇದುವರೆಗಿನ ಕಥೆಗಳು' ಎಂದು ಸಮಗ್ರವಾಗಿ ಪ್ರಕಟವಾಗಿವೆ. ಪಾರಿವಾಳ ಮತ್ತು ಹಕ್ಕಿ ಹಿಡಿಯುವವನು, ಆಲಿಬಾಬಾ ಮತ್ತು ಇತರ ಕಥೆಗಳು, ಪ್ರಾಚೀನ ಭಾರತದ ಹಕ್ಕಿ ಕಥೆಗಳು, ಪ್ರಾಚೀನ ಭಾರತದ ಕಥೆಗಳು, ಮೀನುಗಾರ ಮತ್ತು ರಾಜ. ಮೂರ್ಖ ರಾಜಕುಮಾರರು, ಮಯೂರ- ಅವರ ಅನುವಾದಿತ ಮಕ್ಕಳ ಕಥೆಗಳ ಸಂಕಲನಗಳು. ಉತ್ತಮ ಅನುವಾದಕರಾಗಿದ್ದ ಸದಾಶಿವರ ಇತರ ಅನುವಾದಿತ ಕೃತಿಗಳು: ಕಥರೀನಾ ಬ್ಲಂ, ಶಿಬಿರದ ಹಾದಿಯಲ್ಲಿ. ತಾಯಿ ಮತ್ತು ಚೆಲುವು, ಅಂಕಣ ಬರಹ ಗುರು-ಶಿಷ್ಯ, ಇದೀಗ ನಿಮ್ಮ ಕೈಯಲ್ಲಿ ಸದಾ ವಾರೆನೋಟ. ಸದಾಶಿವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ ಸಂದಿದ್ದವು. ಅವರು ಬೆಂಗಳೂರಿನಲ್ಲಿ 2007ರ ಜನವರಿ 9ರಂದು ನಿಧನರಾದರು.

ಜಿ.ಎಸ್. ಸದಾಶಿವ

(13 Sep 1939-09 Jan 2007)