About the Author

ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು  1913 ಆಗಸ್ಟ್ 23 ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ಅವರು ಭಾಷಾ ತಜ್ಞರಾಗಿ, ಬರಹಗಾರರಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದರು. ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಸಹಾಯ ನೀಡಿದರು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದರು. 1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರ ವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965-67ರವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಹೀಗೆ ಅವರು ವಿವಿಧ ರೀತಿಗಳಲ್ಲಿ ಸಲ್ಲಿಸಿದ ಸೇವೆ ಅಪಾರವಾದದ್ದು.

ಪ್ರೊ ಜಿ. ವೆಂಕಟಸುಬ್ಬಯ್ಯನವರು ರಚಿಸಿರುವ ಕೃತಿಗಳಲ್ಲಿ ವಿಮರ್ಶೆ - ನಯಸೇನ, ಅನುಕಲ್ಪನೆ; ಸಂಪಾದಿತ ಕೃತಿಗಳು - ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ; ಅನುವಾದ - ಶಂಕರಾಚಾರ್ಯ, ಕಬೀರ, ಲಿಂಡನ್ ಜಾನ್ಸನ್; ಮಕ್ಕಳ ಕೃತಿ - ರಾಬಿನ್‌ಸನ್ ಕ್ರೂಸೋ, ಕವಿಜನ್ನ, ಚಾವುಂಡರಾಯ; ಕಾವ್ಯಕೃತಿ - ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ ಮುಂತಾದವು ಪ್ರಖ್ಯಾತವಾಗಿವೆ. ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ಕನ್ನಡ ಸಾಹಿತ್ಯಲೋಕದ ಸಾರಸ್ವತರು ಮುಂತಾದ ವಿಶಿಷ್ಟ ಕೃತಿಗಳೂ ಸೇರಿದಂತೆ ಪ್ರೊ. ಜಿ. ವಿ ಅವರು ಅರವತ್ತಕ್ಕೂ ಹೆಚ್ಚು ಮಹತ್ವಪೂರ್ಣ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಜೆ. ಕೃಷ್ಣಮೂರ್ತಿ ಅವರ ವಿಚಾರವನ್ನೂ ಆಪ್ತವಾಗಿ ಕನ್ನಡಿಗರಿಗೆ ಬರೆದುಕೊಟ್ಟಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಪ್ರೊ. ಜಿ. ವಿ. ಅವರಿಗೆ ಸಂದಿವೆ. 

ಜಿ. ವೆಂಕಟಸುಬ್ಬಯ್ಯ

Awards