About the Author

ಸಣ್ಣ ಕತೆಗಳ ಮುಖಾಂತರ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದ ಗೀತಾ ಕುಲಕರ್ಣಿಯವರು ಹುಟ್ಟಿದ್ದು 1927 ಜೂನ್ 04 ರಂದು ಮುಂಬಯಿಯಲ್ಲಿ.  ಅವರು ಮಂಗಳೂರಿನ ಕೆ.ಟಿ ಆಳ್ವ ಅವರ ಪುತ್ರಿ. ಮೂಲ ಹೆಸರು ಅಹಲ್ಯಾ. ಅಹಲ್ಯಾ ಅವರೇ ಮುಂದೆ ಹಲವಾರು ಕಾದಂಬರಿಗಳನ್ನು ಬರೆದು ಗೀತಾ ಕುಲಕರ್ಣಿ ಎಂದೇ ಪ್ರಸಿದ್ಧರಾಗುತ್ತಾರೆ. ಅನೇಕ ಕಾದಂಬರಿಗಳು, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪ್ರವಾಸಸಾಹಿತ್ಯ, ವಿಡಂಬನೆ ಎಲ್ಲವೂ ಸೇರಿ ಸುಮಾರು 25 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಧೈರ್ಯ, ನಿಸ್ಸಂಕೋಚದ ಸ್ವಭಾವದ, ಎಂತಹ ಸಂದರ್ಭದಲ್ಲೂ ಎದೆಗುಂದದೆ ನಿಭಾಯಿಸುವ ಛಾತಿಯ ಗುಣದ ಕತೆ-ಕಾದಂಬರಿಕಾರ್ತಿ ಗೀತಾ ಕುಲಕರ್ಣಿಯವರಿಗೆ ‘ಸುವರ್ಣೆಯ  ಗ್ರೀನ್‌ ರೂಂ’ ಕತೆ ಪ್ರಕಟವಾದ ನಂತರ ಸಾಕಷ್ಟು ಹೆಸರು ತಂದುಕೊಟ್ಟಿತು. ತೇಲಿಹೋದ ಮೋಡ, ಮೌನಸಂಧಾನ, ಸುವರ್ಣೆಯ ಗ್ರೀನ್‌ ರೂಂ, ಚಿಪ್ಪಿನೊಳಗಿನ ಮುತ್ತು, ಪಾತಾಳ, ಕಾಡುಗುಲಾಬಿ, ಅಪ್ಪಗೆ ಬರೆಯಬೇಕು ಮುಂತಾದ ಸಂಕಲನಗಳನ್ನು ರಚಿಸಿದ್ದಾರೆ. ಅವರ ಕಂಬನಿ ಒರೆಸಿದ ಕೈ ಹಾಗೂ ಸಂಬಂಧ, ದೀಪ ಮಿಂಚಿತು, ಮೌನ ಸಂಧಾನ ಕಾದಂಬರಿಗಳು ವಿಶ್ವವಿದ್ಯಾಲಯದ ಹಲವು ತರಗತಿಗಳಿಗೆ ಪಠ್ಯಪುಸ್ತಕಗಳಾಗಿವೆ. 

’ಸ್ವಪ್ನಮಂದಿರ, ಶೋಭನ, ದೀಪಮಿಂಚಿತು, ಸಂಬಂಧ, ನೂಲಏಣಿ, ಕಂಬನಿ ಒರೆಸಿದ ಕೈ, ಗರ್ಭ’ ಮುಂತಾದವು ಇವರ ಪ್ರಮುಖ ಕಾದಂಬರಿಗಳು. ‘ಮೂರು ನಾಟಕಗಳು’ ಅಲ್ಲದೆ ಮಕ್ಕಳ ಸಾಹಿತ್ಯದಲ್ಲೂ ಸಾಕಷ್ಟು ಕೃಷಿ ಮಾಡಿದ್ದು ಹೂಮನೆ, ನೇಜಿಗುಬ್ಬಚ್ಚಿ, ಹಾರುವ ಕಂಬಳಿ, ಅರವತ್ನಾಲ್ಕು ವಿದ್ಯೆ, ಏಳು ಕನ್ನಿಕೆಯರು, ತುಳುಜಾನಪದ ಕಥೆಗಳು, ಇನ್ನಷ್ಟು ತುಳು ಜಾನಪದ ಕಥೆಗಳನ್ನು ರಚಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿಯೂ ಕ್ರಿಯಾಶೀಲರಾಗಿದ್ದ ಗೀತಾ ಕುಲಕರ್ಣಿಯವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆಯಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ,  ಗ್ರಂಥಾಲಯದ ಸಗಟು ಪುಸ್ತಕ ಖರೀದಿ ಸಮಿತಿಯ ಸದಸ್ಯರಾಗಿ, ಕೇಂದ್ರಸಾಹಿತ್ಯ ಅಕಾಡಮಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1979 ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಪಡೆದಿದ್ಧಾರೆ. 1986 ರ ಮೇ 25 ರಂದು ಇವರು ನಿಧನರಾದರು. 

 

ಗೀತಾ ಕುಲಕರ್ಣಿ

(04 Jul 1927-01 May 1986)