About the Author

ಸಮಕಾಲೀನ ಸಂಸ್ಕೃತಿ ಚಿಂತಕರು ಹಾಗೂ ಕನ್ನಡ ಅಧ್ಯಾಪಕರಾದ ಡಾ. ಗೋವಿಂದರಾಯ ಎಂ ಇವರು ಮೂಲತಃ ಪಾವಗಡ ತಾಲ್ಲೂಕಿನ ಚನ್ನಕೇಶವಪುರ ಗ್ರಾಮದ ಮೂಡ್ಲಗಿರಿಯಪ್ಪ ಮತ್ತು ಶ್ರೀಮತಿ ಚಿಕ್ಕವ್ವ ಇವರ ಪುತ್ರನಾಗಿ 15.02.1981 ರಂದು ಜನಿಸಿದರು. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಚನ್ನಕೇಶವಪುರದಲ್ಲಿ ಮುಗಿಸಿ, ಮಧುಗಿರಿಯ ಶ್ರೀ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ 65ನೇ ರ್‍ಯಾಂಕ್ ಮೂಲಕ ಪದವಿ ಪಡೆದರು. 2002-2004ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪೂರೈಸಿ ಐದನೇ ರ್‍ಯಾಂಕ್ ಪಡೆದಿದ್ದಾರೆ. ನಂತರ ತುಮಕೂರಿನ ಕೆ. ಎಸ್.ಇ. ಎಫ್ .ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಶಿಕ್ಷಣವನ್ನು ಪೂರೈಸಿ, ನಂತರ ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಂ.ಇಡಿ. ಪದವಿಯನ್ನು ಆರನೇ ರ್‍ಯಾಂಕ್ ನಲ್ಲಿ ಪಡೆದಿದ್ದಾರೆ. ಭಾಷೆ, ಸಾಹಿತ್ಯ, ಮತ್ತು ಸಂಸ್ಕೃತಿ , ಸಂಗೀತ ಹಾಗೂ ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಾಗಿದ್ದು "ಗಡಿನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ : ಒಂದು ಅಧ್ಯಯನ " (ವಿಶೇಷವಾಗಿ ತುಮಕೂರು ಜಿಲ್ಲಾ ಗಡಿನಾಡು) ಎಂಬ ವಿಷಯದ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾ. ವಿ. ನಾಗರಾಜ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ತುಮಕೂರು ಜಿಲ್ಲೆಯ ಕುಣಿಗಲ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

'ಗಾಂಧಿ ಎಂಬ ಕೌತುಕ', 'ಅಂಬೇಡ್ಕರ್ ಎಂಬ ಅಂತಃಕರಣ' ಪುಸ್ತಕಗಳನ್ನು ಇವರು ಸಂಪಾದಿಸಿದ್ದಾರೆ. 'ಪುನರ್ಕಲ್ಪ' ಮತ್ತು 'ಕನ್ನಡದ ನಾಳೆಗಳು' ಎಂಬ ಪುಸ್ತಕಗಳನ್ನು ಸ್ನೇಹಿತರೊಂದಿಗೆ ಸಂಪಾದಿಸಿದ್ದಾರೆ. ಐ.ಎಸ್.ಎಸ್. ಎನ್. ಮತ್ತು ಐ. ಎಸ್. ಬಿ. ಎನ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟವಾಗಿವೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಟ್ಯಾಕಲ್ ಸಂಸ್ಥೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್ ನ ಕನ್ನಡ ವಿಭಾಗದ ಸಹಯೋಗದಲ್ಲಿ 'ಕನ್ನಡ ಸಾಹಿತ್ಯ ಸಂವಾದ ಮಾಲೆ' ಎಂಬ ವಿನೂತನ ಆನ್ಲೈನ್ ಕಾರ್ಯಕ್ರಮಗಳನ್ನು ಸಂಚಾಲಕರಾಗಿ ನಡೆಸುತ್ತಿದ್ದಾರೆ. ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸುಮಾರು 500ಕ್ಕೂ ಹೆಚ್ಚು ಉಪನ್ಯಾಸಗಳನ್ನು ನಡೆಸಿ ಕೊಟ್ಟಿರುವ ಹೆಗ್ಗಳಿಕೆ ಇವರದ್ದು. ಇವರಿಗೆ ಪಾವಗಡ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತುಮಕೂರು ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ, ಕರುನಾಡ ವಿಜಯಸೇನೆ ವತಿಯಿಂದ 'ವಿದ್ಯಾ ವಾರಿಧಿ ಪ್ರಶಸ್ತಿ'  ಸಂದಿದೆ. 

 

ಗೋವಿಂದರಾಯ ಎಂ

(15 Feb 1981)