ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರ ಪ್ರಕಟಿತ ಕೃತಿಗಳು: 'ನಿರ್ಗುಣ', ʻಶಕುಂತಳಾʼ, ʻದೇವರ ರಜಾʼ, ʻಲೋಲʼ ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ', ಬಿಳಿಯ ಚಾದರ, ಹಿಜಾಬ್, ಕಾಯಾ ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'.
ʻವೈದ್ಯ, ಮತ್ತೊಬ್ಬʼ ಕೃತಿಗೆ 2005ರ ಡಾ.ಪಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ʻಗುಣʼ ಕಾದಂಬರಿಗೆ ಸೂಯನಾರಾಯಣ ಚಡಗ ಪ್ರಶಸ್ತಿ, ʻಹಿಜಾಬ್ʼ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ, ಡಾ.ಎಚ್. ಶಾಂತಾರಾಂ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2018ರ ಸಾಲಿನ ʻಪುಸ್ತಕ ಪ್ರಶಸ್ತಿʼ ದೊರಕಿವೆ.
ಇವರ ಕಥೆಗಳು ಮರಾಠಿ, ಕೊಂಕಣ, ಮಲೆಯಾಳಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗೂ ಅನುವಾದವಾಗಿವೆ. ʻಹಿಜಾಬ್ʼ ಕಾದಂಬರಿ 2020ರಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದವಾಗಿದೆ.