About the Author

ಲೇಖಕ ಎಚ್.ಜಿ. ಸಣ್ಣಗುಡ್ಡಯ್ಯ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವರು. ತಂದೆ-ಗೋವಿಂದಪ್ಪ,ತಾಯಿ- ತಿಮ್ಮಕ್ಕ. ಕೂಲಿಮಠದಲ್ಲಿ ಅಕ್ಷರಾಭ್ಯಾಸ ಆರಂಭಿಸಿದ ಅವರು ಬುಕ್ಕಾಪಟ್ಟಣದಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ತುಮಕೂರಿನಲ್ಲಿ ಇಂಟರ್ ಮಿಡಿಯೇಟ್ ವರೆಗೆ ಅಭ್ಯಾಸ ಮಾಡಿದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.

ತಿ.ನಂ.ಶ್ರೀ, ಡಿ.ಎಲ್.ಎನ್., ತ.ಸು.ಶಾ., ಎಸ್.ವಿ.ಪಿ., ಮುಂತಾದವರ ಮಾರ್ಗದರ್ಶನದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಸಮಾಜವಾದಿ ರಾಷ್ಟ್ರಗಳ ಪ್ರಗತಿಪರ ಲೇಖಕರ ಗ್ರಂಥಗಳನ್ನು ಓದಿ ಪ್ರಭಾವಿತರಾಗಿದ್ದರು. ತುಮಕೂರಿನ ಸರಕಾರಿ ಮೊದಲ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭಿಸಿದ ಸಣ್ಣಗುಡ್ಡಯ್ಯ ಅವರು ನಂತರ ರೀಡರಾಗಿ, ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ ನಂತರ ಶಿವಮೊಗ್ಗ, ಕೋಲಾರ ಕಾಲೇಜುಗಳಲ್ಲಿಯೂ ಸೇವೆ ಸಲ್ಲಿಸಿ ಮತ್ತೆ ತುಮಕೂರು ಕಾಲೇಜಿನಲ್ಲಿದ್ದಾಗಲೇ ನಿವೃತ್ತಿ ಹೊಂದಿದರು.

ಮೊದಲ ಕವನ ಸಂಕಲನ ಅಭೀಪ್ಸೆ. ನಂತರ ವಸಂತಪದ – ಕನಸುಗಳು, ಭಿನ್ನ ಕವನ ಸಂಕಲನಗಳು ಪ್ರಕಟಗೊಂಡಿವೆ. , ಏಕಾಂತ ಮತ್ತು ಇತರ ಪ್ರಬಂಧಗಳು’ ಮತ್ತು ‘ಹದ್ದು ಮತ್ತು ಇತರ ಪ್ರಬಂಧಗಳು’ 1995-96ನೆಯ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಬಿ.ಎ., ಬಿ.ಎಸ್ಸಿ., ಬಿ.ಕಾಂ. ತರಗತಿಗಳಿಗೆ ‘ಏಕಾಂತ ಮತ್ತು ಇತರ ಪ್ರಬಂಧಗಳು’ ಪಠ್ಯವಾಗಿ ಆಯ್ಕೆಯಾಗಿದೆ.

ಭಾಸಮಹಾಕವಿಯ ನಾಟಕದ ರೂಪಾಂತರವಾದ ‘ಪ್ರತಿಮಾ’, ಸಂಪಾದಿತ ಪ್ರೇಮಗೀತೆಗಳ ಸಂಕಲನ ‘ಪಾರಿಜಾತ’, ತಮ್ಮ ನೆಚ್ಚಿನ ಗುರುಗಳ ಕುರಿತು ಜೀವನ, ವ್ಯಕ್ತಿತ್ವ ಮತ್ತು ಕೃತಿ ಸಮೀಕ್ಷೆ ನಡೆಸಿರುವ ‘ತೀ.ನಂ. ಶ್ರೀಕಂಠಯ್ಯ’, ಸಂಪಾದಿತ ವೈಚಾರಿಕ ಲೇಖನಗಳ ಸಂಗ್ರಹ ‘ವಿಚಾರ ಸಾಹಿತ್ಯ’ ಮತ್ತು ಅನುವಾದಿತ ಕೃತಿ ‘ರಾಜ್ಯಶಾಸ್ತ್ರ’. ಸಂಪಾದಿತ ಕವನ ಸಂಗ್ರಹ ‘ಕಾವ್ಯಾಂಜಲಿ’. ಅಭಿಪ್ಸೆ- ಕವನ ಸಂಕಲನ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ (1962), ‘ಏಕಾಂತ ಮತ್ತು ಇತರ ಪ್ರಬಂಧಗಳು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (1993), ‘ಹದ್ದು ಮತ್ತು ಇತರ ಪ್ರಬಂಧಗಳು’ ಕೃತಿಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (1998) ಮತ್ತು 2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಜೊತೆಗೆ ಪಾವಗಡ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವ ಲಭಿಸಿವೆ. ತುಮಕೂರಿನ ಸಮುದಾಯ, ವಿಜ್ಞಾನಕೇಂದ್ರ, ಬಂಡಾಯ ಸಾಹಿತ್ಯ ಸಂಘಟನೆ ಮೊದಲಾದ ಸಾಂಸ್ಕೃತಿಕ ಸಂಘಟನೆಗಳ ಕೇಂದ್ರವ್ಯಕ್ತಿಯಾಗಿ ಶ್ರಮಿಸುತ್ತಿದ್ದ ಸಣ್ಣಗುಡ್ಡಯ್ಯನವರು 2007 ಸೆಪ್ಟೆಂಬರ್ 17ರಂದು ನಿಧನರಾದರು. 

ಎಚ್. ಜಿ. ಸಣ್ಣಗುಡ್ಡಯ್ಯ

(01 Jun 1935)