About the Author

ಊರು, ವಿಳಾಸಗಳಿಲ್ಲದ ಅಲೆಮಾರಿ ಸಮುದಾಯವಾದ 'ಕೊರಚ' ಜನಾಂಗದ ಡಾ. ಹೆಚ್. ಆರ್. ಸ್ವಾಮಿ ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು. ತಂದೆ- ಹನುಮಂತಪ್ಪ, ತಾಯಿ- ಕುಮಾರಮ್ಮ, ಚಿಕ್ಕಜಾಜೂರು, ಅರಸೀಕೆರೆ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾಲಯದಿಂದ ಕೊರಚ ಜನಾಂಗವನ್ನು ಕುರಿತು ಅಧ್ಯಯನ ನಡೆಸಿ ಪಿ.ಹೆಚ್.ಡಿ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಬಂಡಾಯ ಸಾಹಿತ್ಯ ಸಂಘಟನೆ, ದಲಿತ-ರೈತ-ವಿಜ್ಞಾನ ಚಳವಳಿ, ಪರಿಸರ ಹಾಗೂ ರಂಗಚಟುವಟಿಕೆ ಮತ್ತು ಇತರ ಪ್ರಗತಿಪರ ಆಂದೋಲನಗಳಲ್ಲಿ ಗುರುತಿಸಿಕೊಂಡವರು.

ಕರ್ನಾಟಕದ ವಿಚಾರವಾದಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಳೆದ ಮುವತ್ತೈದು ವರ್ಷಗಳಿಂದ ನಾಡಿನಾದ್ಯಂತ 'ಪವಾಡ ರಹಸ್ಯ ಬಯಲು' ಎಂಬ ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಅರಸೀಕೆರೆ 'ವಿಜ್ಞಾನ ಕೇಂದ್ರ' ಹಾಗೂ 'ನೇಗಿಲಯೋಗಿ ಟ್ರಸ್ಟ್ (ನೆಯೋಟ್) ಸಂಚಾಲಕರಾಗಿ ಪರಿಸರ ಜಾಗೃತಿ, ರಂಗಚಟುವಟಿಕೆ ಹಾಗೂ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಯ ಸ (2001-2003).ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ(2012).ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ (2007). ಕರ್ನಾಟಕ ಸರ್ಕಾರದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ (2016).

ಹಾಸನದಲ್ಲಿ ನಡೆದ ಎರಡನೇ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ (2015). ಅರಸೀಕೆರೆ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ (2018). ಇದೀಗ ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಬಾಳೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ.

'ಮಾನವತೆಯ ತುಡಿತಗಳು' (ಸಂಪಾದಿತ), 'ಬುಡಕಟ್ಟು ಸಂಸ್ಕೃತಿ' (ಬುಡಕಟ್ಟು ಅಧ್ಯಯನ), 'ಬತ್ತಲಾರದ ಬದುಕು' (ಸಂಪಾದಿತ), 'ಆರೋಗ್ಯ ಮತ್ತು ಮೂಢನಂಬಿಕೆ' (ಸಂಪಾದಿತ)ಪ್ರಕಟಿತ ಕೃತಿಗಳು. 'ಕರ್ನಾಟಕದ ಕೊರಚರು' ಇವರ ಸಂಶೋಧನಾ ಕೃತಿ.

ಹೆಚ್.ಆರ್. ಸ್ವಾಮಿ