ಕರ್ನಾಟಕದ ಕೊರಚರು

Author : ಹೆಚ್.ಆರ್. ಸ್ವಾಮಿ

Pages 239

₹ 200.00




Year of Publication: 2019
Published by: ನೇಗಿಲ ಯೋಗಿ ಟ್ರಸ್ಟ್
Address: #161, ಮರಡಿ, 2ನೇ ಮುಖ್ಯರಸ್ತೆ, ಕೆಂಗೇರಿ ಸ್ಯಾಟ್ ಲೈಟ್ ಟೌನ್, ಬೆಂಗಳೂರು-560060

Synopsys

”ಕರ್ನಾಟಕದ ಕೊರಚರು’ ಈ ಕೃತಿಯು ಹೆಚ್.ಆರ್. ಸ್ವಾಮಿ ಬರೆದಿದ್ದಾರೆ. ಬುಡಕಟ್ಟು ಜನಾಂಗಗಳ ಪೈಕಿ ಕೊರಚರು ಪ್ರಮುಖರು. ಈ ಸಮುದಾಯದ ಮಹತ್ವದ ಸಂಗತಿಗಳನ್ನು ದಾಖಲಿಸಿದ್ದೇ ಈ ಕೃತಿ. ಹಲವಾರು ಕಾರಣಗಳಿಗಾಗಿ ಗುಡ್ಡಗಾಡು-ಬುಡಕಟ್ಟು ಜನತೆ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಈ ಸಮುದಾಯಗಳ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಸಂಶೋಧನಾತ್ಮಕ ಕೃತಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃತಿಯುಎಲ್ಲ ಪೂರ್ವಗ್ರಹಗಳನ್ನು ಕಳೆದುಕೊಂಡು, ವಸ್ತುಸ್ಥಿತಿಯನ್ನು ದಾಖಲಿಸಿದೆ.

About the Author

ಹೆಚ್.ಆರ್. ಸ್ವಾಮಿ

ಊರು, ವಿಳಾಸಗಳಿಲ್ಲದ ಅಲೆಮಾರಿ ಸಮುದಾಯವಾದ 'ಕೊರಚ' ಜನಾಂಗದ ಡಾ. ಹೆಚ್. ಆರ್. ಸ್ವಾಮಿ ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು. ತಂದೆ- ಹನುಮಂತಪ್ಪ, ತಾಯಿ- ಕುಮಾರಮ್ಮ, ಚಿಕ್ಕಜಾಜೂರು, ಅರಸೀಕೆರೆ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾಲಯದಿಂದ ಕೊರಚ ಜನಾಂಗವನ್ನು ಕುರಿತು ಅಧ್ಯಯನ ನಡೆಸಿ ಪಿ.ಹೆಚ್.ಡಿ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಬಂಡಾಯ ಸಾಹಿತ್ಯ ಸಂಘಟನೆ, ದಲಿತ-ರೈತ-ವಿಜ್ಞಾನ ಚಳವಳಿ, ಪರಿಸರ ಹಾಗೂ ರಂಗಚಟುವಟಿಕೆ ಮತ್ತು ಇತರ ಪ್ರಗತಿಪರ ಆಂದೋಲನಗಳಲ್ಲಿ ಗುರುತಿಸಿಕೊಂಡವರು. ಕರ್ನಾಟಕದ ವಿಚಾರವಾದಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಳೆದ ಮುವತ್ತೈದು ವರ್ಷಗಳಿಂದ ನಾಡಿನಾದ್ಯಂತ 'ಪವಾಡ ರಹಸ್ಯ ಬಯಲು' ಎಂಬ ...

READ MORE

Reviews

ತುತ್ತು ಕೂಳಿಗಾಗಿ ಕದ್ದು ಪ್ರಾಣ ತೆದ್ದವರು

ತೀವ್ರ ನಿರ್ಲಕ್ಷ್ಯಕ್ಕೆ ಮತ್ತು ಕಾಲ್ತುಳಿತಕ್ಕೆ ಒಳಗಾದ ಅಲೆಮಾರಿ ಸಮುದಾಯದ ಕೊರಚರ ಬದುಕು-ಸಂಸ್ಕೃತಿಯತ್ತ ಬೆಳಕು ಚೆಲ್ಲುವ 'ಕರ್ನಾಟಕದ ಕೊರಚರು' ಎನ್ನುವ ಸಂಶೋಧನಾ ಕೃತಿಯನ್ನು ಡಾ. ಹೆಚ್. ಆರ್. ಸ್ವಾಮಿ ರಚಿಸಿದ್ದಾರೆ. 'ತುತ್ ಕೂಳ್ಕಾಗಿ ತಿಗ್ಡಿ ಪಾಣುಕುಡ್ತ ನಟ್ ಜನಂಗಳ್ಕ...' (ತುತ್ತು ಕೂಳಿಗಾಗಿ ಕದ್ದು ಸಮಾಜದ ಘೋರ ಶಿಕ್ಷೆಯಿಂದ ಪ್ರಾಣ ತೆದ್ದ ನನ್ನ ಸಮುದಾಯದ ಬಂಧುಗಳಿಗೆ) 

ಪುಸ್ತಕವನ್ನು ಅರ್ಪಿಸಿದ್ದಾರೆ. ಕೊರಚರು ಕರ್ನಾಟಕದಾದ್ಯಂತ ಕ್ಷೇತ್ರಕಾರ್ಯ ನಡೆಸಿ ಕೊರಚ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಹೆಚ್ ಆರ್ ಸ್ವಾಮಿ ದಾಖಲಿಸಿದ್ದಾರೆ. ಕೊರಚರ ವೃತ್ತಿಗಳಲ್ಲಿ ಕಳ್ಳತನವೂ ಒಂದು. ಮದ್ಯ ಸೇವನೆಗಂತೂ ವಿಶೇಷ ಸ್ಥಾನ, ನೋವು, ಅವಮಾನಗಳ ಅರಗಿಸಿಕೊಳ್ಳಲು ಮದ್ಯದ ಮತ್ತು ಅವರಿಗೆ ಮದ್ದೇನೋ? ಹುಟ್ಟು ಸಾವು, ಹಬ್ಬ, ನ್ಯಾಯ ಪಂಚಾಯ್ತಿ ಯಾವಾಗಲೂ ಮದ್ಯ ಇರಲೇ ಬೇಕು. ಹುಟ್ಟಿನಿಂದ ಸಾಯುವ ತನಕ ತಬ್ಬಲಿಗಳಂತೆಯೇ ಬದುಕುವ ಈ ಜನರನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಾಜ ಸೋತಿದೆ. ಸೋತ ಸಮಾಜದ ಕಣ್ಣೆರೆಸುವ ಕೆಲಸವನ್ನು ಪುಸ್ತಕ ಮಾಡಿದೆ.

ಕೃಪೆ : ವಿಜಯ ಕರ್ನಾಟಕ (2020 ಫೆಬ್ರವರಿ 09)

...........................................................................................................................................................................................

ಕೊರಚ ಪ್ರಜ್ಞೆಯ ಸಂವಿಧಾನ

ಸುಮಾರು ಮೂರು ದಶಕಗಳಿಂದಲೂ ತಮ್ಮ ವೃತ್ತಿ ಬದುಕಿನೊಂದಿಗೆ ದಲಿತ, ರೈತ, ಪರಿಸರ, ವಿಜ್ಞಾನ , ರಂಗಭೂಮಿ ಮುಂತಾದ ಸಮಾಜಮುಖಿ ಚಳವಳಿಗಳೊಂದಿಗೆ ಅಪರಿಮಿತ ಪ್ರೀತಿಯಿಂದ ಸಕ್ರಿಯವಾಗಿ ಗುರುತಿಸಿಕೊಂಡಿರುವ ಗೆಳೆಯ ಡಾ. ಎಚ್. ಆರ್. ಸ್ವಾಮಿಯವರ 'ಕರ್ನಾಟಕದ ಕೊರಚರು' ಎಂಬ ಪಿಎಚ್‌ಡಿ ಪ್ರಬಂಧ ಗ್ರಂಥದ ಮೊದಲ ಪುಟಗಳನ್ನು ತೆರೆದಾಗ `ತುತ್ತು ಕೂಳಿಗಾಗಿ ಕದ್ದು ಪ್ರಾಣ ತೆತ್ತ ನನ್ನ ಸಮುದಾಯದ ಬಂಧುಗಳಿಗೆ' ಎಂಬ ಕರುಳು ಧ್ಯಾನದ ಅರ್ಪಣಾ ವಾಕ್ಯವನ್ನು ಓದಿದಾಗಲೇ ಸ್ವಾಮಿಯವರ ಈ ಗ್ರಂಥದ ಅನನ್ಯತೆ ಆಪ್ಯಾಯಮಾನವಾಗಿ ಬಿಚ್ಚಿಕೊಂಡು ಅದರ ಬಗ್ಗೆ ಕುತೂಹಲ ಮತ್ತು ಓದುವ ಪ್ರೀತಿಗಳೆರಡೂ ಹುಟ್ಟಿಕೊಳ್ಳುತ್ತವೆ. - ಡಾ. ಸ್ವಾಮಿಯವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರವೇ ಅವರ ಅಖಂಡ ಜಾತ್ಯಾತೀತತೆಯ ಸಂವೇದನೆಗಳು ಅರ್ಥವಾಗುವುದು. ಅಂಥ ಶ್ರೇಷ್ಠ ಜಾತ್ಯಾತೀತ ಮನೋಭಾವವನ್ನು ಇಟ್ಟುಕೊಂಡೇ ಸ್ವಾಮಿಯವರು ತಮ್ಮ ಸಮುದಾಯದ ಅಥವಾ ಜಾತಿಯ ಸಮಗ್ರ ಸಾಂಸ್ಕೃತಿಕ ಚಹರೆಗಳನ್ನು ಮುಚ್ಚುಮರೆಯಿಲ್ಲದೆ, ಮುಜುಗರಗಳಿಲ್ಲದೆ ತೆರೆದಿಟ್ಟಿರುವುದು ಈ ಗ್ರಂಥಕ್ಕೊಂದು ಅಪರೂಪದ ಸಾಹಿತ್ಯಕ ಸಹಚರ್ಯೆಯನ್ನು ತಂದುಕೊಟ್ಟಿರುವುದಲ್ಲದೆ ಬೇರೆ ಪಿಎಚ್‌ಡಿ ಗ್ರಂಥಗಳಿಗಿಲ್ಲದ ಹೊಸತನ ಮತ್ತು ಬೆರಗಿನ ಚೌಕಟ್ಟನ್ನು ಗಳಿಸಿಕೊಟ್ಟಿದೆ.

ಅತ್ಯಂತ ಸಣ್ಣ ಪ್ರಮಾಣದ ಜನಸಂಖ್ಯೆಯುಳ್ಳ ‘ಕೊರಚ' ಎಂಬ ಅಲೆಮಾರಿ ಸಮುದಾಯಕ್ಕೆ ಸೇರಿದ ಡಾ. ಸ್ವಾಮಿ ತಮ್ಮ ಸಮುದಾಯವನ್ನು ತನ್ನೆಲ್ಲ ಸೂಕ್ಷ್ಮ ಸಂವೇದನೆಗಳೊಂದಿಗೆ ಹಿಡಿ ಹಿಡಿಯಾಗಿ ಅನಾವರಣಗೊಳಿಸುತ್ತಾ ಅದರೊಂದಿಗೆ ತಾವೂ ಅನಾವರಣಗೊಳ್ಳುವ ಪರಿ ಒಂದು ಹೊಸ ಸಾಂಸ್ಕೃತಿಕ ವೇದಿಕೆಯನ್ನು ನಿರ್ಮಿಸಿರುವ ಜಗಲಿಯಂತೆ ಪ್ರಕಟಗೊಂಡಿರುವುದು ಈ ಗ್ರಂಥದ - ಪುಟಪುಟದಲ್ಲೂ ಪ್ರಕಟಗೊಂಡಿದೆ.

ಪ್ರಸ್ತುತದಲ್ಲಿಯೂ ಆರು ವಿಳಾಸಗಳಿಲ್ಲದ ಅದೆಷ್ಟೋ ಕೊರಚ ಸಮುದಾಯದ ಕುಟುಂಬಗಳು ತಮ್ಮ ಅಲೆಮಾರಿ ಬದುಕಿಗೆ ಒಡಿಕೊಂಡು ಬದುಕು ನಡೆಸುತ್ತಿವೆಯೆಂದು ಸ್ವಾಮಿಯವರು ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. ಅನಾಥ ಯುವಕನೊಬ್ಬ ಹಠಮಾರಿತನದಿಂದ ತನ್ನ ಕುಟುಂಬದ ಬೇರುಗಳನ್ನು ಹುಡುಕಲು ಪಡೆವಲ್ಲಿ ಬೀಳುವ ಪಡಿಪಾಟಿಲಿನಂತೆ ಇವರು ಕೊರಚ ಸಮುದಾಯದ ಅಸ್ತಿತ್ವ, ಚರಿತ್ರೆ, ಆಚಾರ ವಿಚಾರ, ಜೀವನಕ್ರಮ, ಸಾಂಸ್ಕೃತಿಕ ಜಿಗುಟು, ಬದುಕಿನ ಕಾಠಿಣ್ಯ ಮುಂತಾದ ಸಕಲೆಂಟು ವಿವರಗಳನ್ನು ಸಂಗ್ರಹಿಸುವಲ್ಲಿ ಪಟ್ಟಿರುವ ಪ್ರೀತಿಯ ಪಡಿಪಾಟಲನ್ನು ಈ ಪ್ರಬಂಧವೆಂಬ ಪುಸ್ತಕದ ಪುಟ ಪುಟಪುಟಗಳೂ ಗಟ್ಟಿಯಾಗಿಯೇ ಪಿಸುಗುಡುತ್ತವೆ . ಮುಂದುವರೆದ ವೈಟ್ ಕಾಲರ್ ಸಮುದಾಯಗಳು ಕಾನೂನಿನ ಚೌಕಟ್ಟಿನಲ್ಲಿ ಆರ್ಥಿಕ ವಂಚನೆಗಳನ್ನು, ದರೋಡೆಗಳನ್ನು ಮಾಡುವಾಗ ಹೊಟ್ಟೆ ಹಸಿವು ನೀಗಿಕೊಳ್ಳಲು ಆರ್ಥಿಕ ಕೋಭೆಯಿಂದ ನರಳುವ ಕೊರಚ ಸಮುದಾಯ ಕಳ್ಳತನ ಮಾಡಿದರೆ ಏನು ತಪ್ಪು ಎಂಬ ಪ್ರಶ್ನೆ ಕಾರ್ಲ್ ಮಾರ್ಕ್ಸ್‌ನ ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ . 1871 ಇಸವಿಯಲ್ಲಿ ಭಾರತದಲ್ಲಿನ ಬ್ರಿಟಿಷ್ ಸರ್ಕಾರ ಕ್ರಿಮಿನಲ್ ಕಾಯೆಯೊಂದನ್ನು ಜಾರಿಗೊಳಿಸಿ ಕೊರಚರು ಕ್ರಿಮಿನಲ್ ಬುಡಕಟ್ಟುಗಳಲ್ಲಿ ಒಂದೆಂದು ಪಟಿ ಮಾಡುತ್ತಾರೆ ಮತ್ತು ಕೊರಚರನು ಛಿಠಿಡಿಟಿ ಛಡಿಟುಟಿಚಿಟ ಎಂದು ಘೋಷಿಸುತ್ತದೆ. ಆದರೆ ಅವರ ಕಳ್ಳತನದ ಹಿಂದೆ ಅಡಗಿರುವ ಕಾರಣಗಳನ್ನು ವಸಾಹತುಶಾಹಿ ಯಾವೊತ್ತೂ ಗ್ರಹಿಸಲು ಹೋಗುವುದಿಲ್ಲ. ಇವೊತ್ತಿಗೂ ಕಲ್ಯಾಣ ರಾಷ್ಟಗಳೆಂದು ಘೋಷಿಸಿಕೊಂಡಿರುವ ಭಾರತದಂಥ ಪ್ರಜಾಪ್ರಭುತ್ವ ರಾಷಗಳ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಬಡವರು, ನಿರ್ಗತಿಕರು ಏಕೆ ಕಳ್ಳತನ ಮಾಡುತ್ತಾರೆಂಬ ಸತ್ಯವನ್ನು ಸಂಶೋಧಿಸಲು ಹೋಗುವುದಿಲ್ಲವೆಂಬ ಸಂಗತಿಯನ್ನು ಈ ಗ್ರಂಥದಲ್ಲಿ ಪ್ರೊಫೆಸರ್ ಎಚ್. ಆರ್. ಸ್ವಾಮಿ ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಕರ್ನಾಟಕದ ಕೊರಚರು ಎಂಬ ತಮ್ಮ ಗ್ರಂಥದಲ್ಲಿ ಎಚ್. ಆರ್.

ಸ್ವಾಮಿಯವರು ಐದು ಅಧ್ಯಾಯಗಳಲ್ಲಿ ಕೊರಚ ಸಮುದಾಯದ - ಇತಿಹಾಸವನ್ನು ಅದರೆಲ್ಲಾ ಬೇರುಗಳೊಂದಿಗೆ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಪಯತ್ನಿಸಿ ಯಶಸ್ವಿಯಾಗಿದ್ದಾರೆ ಕೂಡ. ಒಮೊಮ್ಮೆ ಈ ಗ್ರಂಥ ಪ್ರಬಂಧ ಅನ್ನಿಸದೆ ಒಂದು ಕಥೆಯ ರೂಪವನ್ನೋ, ಕಾದಂಬರಿಯ ರೂಪವನ್ನೊ ಪಡೆದುಕೊಂಡು ಓದಿಸಿಕೊಂಡು ಹೋಗುತ್ತಿರುವಂತೆ ಭಾಸವಾಗುತ್ತದೆ. ಇದು ಈ ಪ್ರಬಂಧ ಗ್ರಂಥಕ್ಕಿರುವ ವಿಶೇಷತೆ. ಹಾಗಾಗಿ ಪುಸ್ತಕ ಎಲ್ಲೂ 'ಓದು ಕಠಿಣ' ಎನ್ನಿಸದಂತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇದು ಸಾಹಿತ್ಯ ಕೃತಿಗೆ ಇರಬೇಕಾದ ಅವಶ್ಯ ಲಕ್ಷಣ ಕೂಡ !

ಕೊರಚರ ಹಿನ್ನೆಲೆ ಮತ್ತು ಮೂಲ ಎಂಬ ಅಧ್ಯಾಯದಲ್ಲಿ ಸಾಮಿಯವರು ಅನೇಕ ಬುಡಕಟ್ಟು ಜನಾಂಗಗಳ ನಡುವೆ ಇರುವ ಅತ್ಯಂತ ತೆಳುವಾದ ಗೆರೆಗಳನ್ನೂ ಜಾಣೆಯಿಂದ ಗುರುತಿಸಿರುವುದು ಅವರ ಅಧ್ಯಯನದ ಸೂಕ್ಷತೆ ಮತ್ತು ಅಗಾಧತೆಯನ್ನು ತೆರೆದಿಡುತ್ತದೆ. ಕೊರಚ ಸಮುದಾಯ ಸೃಷ್ಟಿಗೆ ಕೆಲವು ಪುರಾಣ ಮತ್ತು ಐತಿಹ್ಯಗಳನ್ನು ಉಲ್ಲೇಖಿಸುವುದರೊಂದಿಗೆ ಕೊರಚರ ಮೂಲಕ್ಕೆ ಫ್ಯಾಂಟಸಿಯ ಟಚ್ ಅನ್ನು ಕೂಡ ಸ್ವಾಮಿ ಒದಗಿಸುವುದು ಕುತೂಹಲಕರವೆನಿಸುತ್ತದೆ. ಈ ಗ್ರಂಥದಲ್ಲಿ ನಾನು ಕಂಡ ಅತ್ಯಂತ ವೈಶಿಷ್ಟತೆಯೇನೆಂದರೆ ಕೊರಚ ಸಮುದಾಯ ಅಥವಾ ಜಾತಿ ಭಾರತದ ಹಿಂದೂ ಪರಂಪರೆಯ ವೈದಿಕ ವಿಧಿ ವಿಧಾನ ಮತ್ತು ಸಂಸ್ಕೃತಿಗೆ ತತ್ವಿರುದ್ಧವಾಗಿರುವುದು. ಇವರ ಆಚಾರ, ವಿಚಾರ ಸಂಪ್ರದಾಯಗಳು ನಿಸರ್ಗ ಕೇಂದ್ರಿತ ಧಾತುಗಳೊಂದಿಗೆ ಅನುಸಂಧಾನಗೊಂಡಿರುವುದರಿಂದ ಇವರು ಮದುವೆ, ತಿಥಿ, ಹಬ್ಬ ಮುಂತಾದ ಆಚರಣೆಗಳಲ್ಲಿ ವೈದಿಕ್ಯವನ್ನು ದೂರವಿಟ್ಟು ತಮ್ಮದೇ ಆದ ಪ್ರಕೃತಿ ಮೂಲದ ಬೇರು ಬಿನ್ನಾಣಗಳೊಂದಿಗೆ ಅನುಸಂಧಾನಗೊಳ್ಳುವುದೊಂದು ಬೆರಗು ಹುಟ್ಟಿಸುವ ಸಂಗತಿಯೇ ಸರಿ. ಹಾಗೆಂದು ಇವರು ಬೇರೆ ಧರ್ಮಗಳಿಗೆ ಹತ್ತಿರವೆಂದು ತಿಳಿದರೂ ತಪ್ಪಾಗುತ್ತದೆ. ಮುಸ್ಲಿಮರು ಮತ್ತು ಬ್ರಿಟಿಷರು ಈ ನಾಡನ್ನು ವಶಪಡಿಸಿಕೊಂಡು ಆಳಿದರೂ ಆ ಎರಡೂ ಧರ್ಮಗಳ ಪ್ರಭಾವ ಈ ಸಮುದಾಯಗಳ ಮೇಲೆ ಆಗದಿರುವುದು ಈ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯ ಗಟ್ಟಿತನವನ್ನು ಅನಾವರಣಗೊಳಿಸುತ್ತದೆ. ಕೊರಚರು ಅಲೆಮಾರಿಗಳಾಗಿರುವುದರಿಂದ ಹೆಚ್ಚಾಗಿ ಇವರು ಗ್ರಾಮದೇವತೆಗಳ ಆರಾಧಕರಾಗಿರುವುದು ಕಂಡು ಬರುತ್ತದೆ.

ಎರಡನೆಯ ಅಧ್ಯಾಯದಲ್ಲಿ ಕೊರಚರ ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ ಸ್ವಾಮಿಯವರು ಇಲ್ಲಿ ಕುಟುಂಬದ ವಾಸ, ಸಮುದಾಯದ ಒಳಾಡಳಿತ ಪದ್ಧತಿ, ಆಹಾರ ಕ್ರಮ, ಉಡುಗೆ ತೊಡುಗೆ, ಆಭರಣ, ಉದೋಗ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಬೇಟೆ ಮತ್ತು ಕಳ್ಳತನ ಕೊರಚರ ಮುಖ್ಯ ಉದ್ಯೋಗಗಳಾಗಿ ಉಲ್ಲೇಖಗೊಂಡಿದ್ದರೂ ಇತ್ತೀಚಿನ ದಿನಗಳಲ್ಲಿ ಕೊರಚರು ಸರ್ಕಾರಿ ನೌಕರಿ ಮತ್ತು ಐಟಿಬಿಟಿ ನೌಕರಿ, ಉದ್ದಿಮೆ ವ್ಯಾಪಾರದಲ್ಲಿ ತೊಡಗಿರುವುದನ್ನೂ ಪ್ರಸ್ತಾಪಿಸುತ್ತಾರೆ. ಕೊರಚರ ಒಳಾಡಳಿತ ಪದ್ದತಿ ಅತ್ಯಂತ ಸುಭದ್ರವಾದದ್ದೇ ಆಗಿದೆ. ಈ ಸಮುದಾಯ ಮೂಲಭೂತವಾಗಿ ಅಲೆಮಾರಿತನವನ್ನು ಹೊಂದಿರುವುದರಿಂದ ಬೇಟೆಯಾಡುವುದು ಪ್ರಮುಖ ಉದ್ಯೋಗವಾಗಿರುವುದರಿಂದ ಇವರು ಮಾಂಸಾಹಾರಿಗಳು. ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣೆಸು ಹಣ್ಣುಗಳೂ ಇವರಿಗೆ ಪ್ರೀತಿಯ ಆಹಾರವೇ. ಕೊರಚ ಜನಾಂಗ ಅತ್ಯಂತ ಸೆಕ್ಯುಲರ್ ಅನ್ನಿಸುವುದು ಈ ಸಮುದಾಯದಲ್ಲಿ ರೂಢಿಯಲ್ಲಿರುವ ಕ್ರಾಂತಿಕಾರಕ ವಿಧವಾ ವಿವಾಹ ಪದ್ಧತಿಯಿಂದಾಗಿ, ಬ್ರಿಟಿಷರ ಆಗಮನಕ್ಕಿಂತ ಮೊದಲಿನಿಂದಲೂ ಇಂಥ ಸೆಕ್ಯುಲರ್ ಆಲೋಚನೆಗಳು ಮತ್ತು ಆಚರಣೆಗಳು ಈ ಸಮುದಾಯದಲ್ಲಿ ಉಸಿರಾಡುತ್ತಿದ್ದು ಆರೋಗ್ಯ ಪೂರ್ಣ ಬೇರುಗಳ ಇತಿಹಾಸವನ್ನು ಸಾದರಪಡಿಸುತ್ತದೆ. ಸಾಮಾನ್ಯವಾಗಿ ಅಲೆಮಾರಿ ಸಮುದಾಯಗಳು - ಜಂಗಮತನದ ಅಸ್ಮಿತೆಯನ್ನು ಮೈತುಂಬಿಕೊಂಡಿರುವುದು ಕಂಡು ಬರುತ್ತದೆ. ಅದೇ ವೈದಿಕಶಾಹಿ' ಸ್ಥಾವರ' ವನ್ನು ಉಸಿರಾಡುತ್ತಿರುತ್ತವೆ. ಸ್ಥಾವರಕ್ಕಿಂತ ಜಂಗಮತನ ಅತ್ಯಂತ ಅಚಲವೂ, ಉನ್ನತವೂ, ಆರೋಗ್ಯಪೂರ್ಣವೂ ಆಗಿರುವುದು ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ ಸಾಬೀತಾಗಿದೆ.

- ಕೇಶವರೆಡ್ಡಿ ಹಂದ್ರಾಳ

ಕೃಪೆ : ಸಂಯುಕ್ತ ಕರ್ನಾಟಕ (2020 ಫೆಬ್ರವರಿ 23)

..........................................................................................................................................

ಐದು ಅಧ್ಯಾಯಗಳಿರುವ ಈ ಕೃತಿಯಲ್ಲಿ ಅಲೆಮಾರಿ ಕೊರಚರ ಹಿನ್ನೆಲೆ, ಜೀವನ ವಿಧಾನ, ಸಾಮಾಜಿಕ ವ್ಯವಸ್ಥೆ, ಕೊರಚರ ಭಾಷೆ ಹಾಗೂ ಸಾಹಿತ್ಯ ಕುರಿತ ಮಾಹಿತಿ ಅನಾವರಣಗೊಂಡಿದೆ. ಚರಿತ್ರೆಕಾರರು ನಿರ್ಲಕ್ಷಿಸಿದ್ದ, ಸಮಾಜದ ಅಪಮಾನ ಮತ್ತು ಗುಮಾನಿಗೆ ಒಳಗಾಗಿದ್ದ ಕೆಳಸಮುದಾಯವೊಂದರ ಸಾಂಸ್ಕೃತಿಕ ಕಥನವನ್ನು ಲೇಖಕರು ಆಪ್ತವಾಗಿ ಚಿತ್ರಿಸಿದ್ದಾರೆ. ಕೊರಚರಲ್ಲಿರುವ ನ್ಯಾಯ ಪಂಚಾಯ್ತಿ ವ್ಯವಸ್ಥೆಯೂ ಅತ್ಯಂತ ಕುತೂಹಲಕರವಾಗಿದೆ. ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು ಹಾಗೂ ಭಾಷಾ ತಜ್ಞರಿಗೆ ಅಧ್ಯಯನ ನಡೆಸಲು ಸಾಕಷ್ಟು ಹೊಳವು ನೀಡುತ್ತದೆ ಈ ಸಂಶೋಧನಾ ಕೃತಿ. ಕರ್ನಾಟಕದ ಆದಿಮ ಪರಂಪರೆಯ ಜನಸಮೂಹದ ವಿಶಿಷ್ಟತೆ ತಿಳಿಯಲೂ ಇದು ಸಹಕಾರಿಯಾಗಿದೆ.

ಕೃಪೆ : ಪ್ರಜಾವಾಣಿ (2020 ಮಾರ್ಚಿ 08)

Related Books