About the Author

ಹಿರಿಯ ಲೇಖಕಿ ಸಾವಿತ್ರಮ್ಮ ರಾಮಸ್ವಾಮಿ ಎಚ್. ವಿ ಅವರು ಕನ್ನಡದ  ಮಹತ್ವದ  ಬರಹಗಾರ್ತಿಯರಲ್ಲೊಬ್ಬರು. ಚ್. ವಿ. ಸಾವಿತ್ರಮ್ಮನವರು  1913ರ ಮೇ 2ರಂದು ಬೆಂಗಳೂರಿನಲ್ಲಿ  ಜನಿಸಿದರು.  ಇವರ ಪೂರ್ಣ  ಹೆಸರು  ಹೆಬ್ಬಳಲು  ವೆಲಪನೂರು  ಸಾವಿತ್ರಮ್ಮ.  ತಂದೆ  ಎಂ. ರಾಮರಾವ್  ಅವರು  ಮತ್ತು  ತಾಯಿ  ಮೀನಾಕ್ಷಮ್ಮನವರು. ಸಾವಿತ್ರಮ್ಮನವರ  ವಿದ್ಯಾಭ್ಯಾಸ ಮಂಡ್ಯ, ಹಾಸನ, ರಾಮನಗರ, ಕೋಲಾರ, ಮೈಸೂರು ಹೀಗೆ  ಹಲವೆಡೆಗಳಲ್ಲಿ  ನೆರವೇರಿತು.  

ಪ್ರೌಢಶಾಲೆಯಲ್ಲಿದ್ದಾಗಲೇ ಸಾವಿತ್ರಮ್ಮನವರಿಗೆ ಎಚ್. ಎ.  ನಾರಾಯಣರಾಯರೊಂದಿಗೆ  ಮದುವೆಯಾಯಿತು. ತಮ್ಮ ಪತಿ  ವಿದೇಶಕ್ಕೆ ವ್ಯಾಸಂಗಕ್ಕಾಗಿ  ಹೋದದ್ದು ಇವರ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ  ಪರಿಣಮಿಸಿತು.  ಹೆಣ್ಣು  ಮಕ್ಕಳು ವಿದ್ಯಾಭ್ಯಾಸ  ಮಾಡುವುದೇ  ಕಷ್ಟ  ಎನ್ನುವ  ಕಾಲದಲ್ಲಿ  1931 ವರ್ಷದಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಿಂದ  ಮೂರು ಬಂಗಾರದ ಪದಕಗಳೊಂದಿಗೆ ಮೈಸೂರು ವಿಶ್ವವಿದ್ಯಾಲಯದ  ಬಿ.ಎ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಸಾವಿತ್ರಮ್ಮನವರದು. 

ಸಾವಿತ್ರಮ್ಮನವರಿಗೆ  ತಮ್ಮ  ಗುರುಗಳಾಗಿದ್ದ ಎ.ಎನ್. ಮೂರ್ತಿರಾವ್, ತೀ.ನಂ.ಶ್ರೀ ಮುಂತಾದ  ಮಹಾನೀಯರಿಂದ  ಸಾಹಿತ್ಯದಲ್ಲಿ  ಅಪಾರ  ಅಭಿರುಚಿ ಮೂಡಿಬಂತು. ಇದಕ್ಕೆ  ಅವರ ಪತಿ  ಎಚ್. ಎ. ನಾರಾಯಣರಾಯರಿಂದ ದೊರೆತ ಪ್ರೋತ್ಸಾಹ ಕೂಡಾ ಅನನ್ಯವಾದುದು.   ಈ  ವಿಶಿಷ್ಟ ದಂಪತಿಗಳು   ಕಾರಂತರು, ಅನುಪಮ, ಮಾಸ್ತಿ, ತ್ರಿವೇಣಿ ಮುಂತಾದ ಮಹಾನ್ ಸಾಹಿತಿಗಳನ್ನು ಮನೆಗೇ ಕರೆಸಿ  ಚಿಂತನ-ಮಂಥನ ನಡೆಸುತ್ತಿದ್ದರು. 

ಸಾವಿತ್ರಮ್ಮನವರ  ಸಾಹಿತ್ಯ ಕೃಷಿಯಲ್ಲಿ  ಅನುವಾದಗಳಿಗೆ  ವಿಶಿಷ್ಟ  ಸ್ಥಾನವಿದೆ.  ಅವರು ರವೀಂದ್ರನಾಥ ಠಾಕೂರರ ನೌಕಾಘಾತ, ಮನೆಜಗತ್ತು, ಗೋರಾ, ಚಿನ್ನದ ದೋಣಿ ಮತ್ತು ಲೂಯಿ ಫಿಷರ್; ಮಹಾತ್ಮಗಾಂಧಿಯವರ ಜೀವನ ಚರಿತ್ರೆ, ಜೀವನ ಸಂದೇಶ; ಅಂಟನ್ ಚೆಕಾವ್‌ರವರ ಸಣ್ಣಕಥೆಗಳ ಅನುವಾದವಾದ ‘ಮದುವಣಗಿತ್ತಿ' ಹೀಗೆ  ಬಹಳಷ್ಟು  ಮಹತ್ಕೃತಿಗಳನ್ನು  ಕನ್ನಡಕ್ಕೆ  ತಂದು  ಮಹತ್ವದ   ಅನುವಾದಕಿ ಎನಿಸಿದ್ದಾರೆ.

ಕನ್ನಡ ಕಥಾಲೋಕದಲ್ಲಿ  ಎಚ್.ವಿ. ಸಾವಿತ್ರಮ್ಮನವರ  ಕಥೆಗಳಿಗೆ ತಮ್ಮದೇ ಆದ ಒಂದು ಸ್ಥಾನವಿದೆ. ಒಂದು ಕಾಲಘಟ್ಟ ಮತ್ತು ಸಮಾಜದ ಮನಸ್ಥಿತಿಯನ್ನು ಸ್ತ್ರೀ ಸಂವೇದನೆಯ ಮೂಲಕ ಹೇಳುವ ಪ್ರಯತ್ನವನ್ನು ಸಾವಿತ್ರಮ್ಮನವರು  ಯಶಸ್ವಿಯಾಗಿ  ಮಾಡಿದ್ದಾರೆ.   ಇತ್ತೀಚೆಗೆ  ಅವರ  ಕಥೆಗಳೆಲ್ಲವನ್ನೂ  ‘ಸಮಸ್ತ  ಕಥೆಗಳು’ ಎಂಬ  ಶೀರ್ಷಿಕೆಯಡಿಯಲ್ಲಿ ನ. ರವಿಕುಮಾರ್ ಮತ್ತು ಎಲ್.ಜಿ. ಮೀರಾ ಅವರು  ಒಟ್ಟಾಗಿ  ತಂದಿದ್ದಾರೆ.  ಈ  ಕೃತಿಯಲ್ಲಿ ಎಚ್.ವಿ. ಸಾವಿತ್ರಮ್ಮನವರ 'ಹೊಸ ಜಗತ್ತು', 'ಪ್ರತೀಕ್ಷೆ', 'ಲಕ್ಷ್ಮೀ', 'ಸರಿದ ನೆರಳು', 'ಮರುಮದುವೆ', 'ನಿರಾಶ್ರಿತೆ' ಮುಂತಾದ  ಎಲ್ಲಾ ಕಥಾ ಸಂಕಲನಗಳು  ಒಂದುಗೂಡಿವೆ. 

ಎಚ್. ವಿ.  ಸಾವಿತ್ರಮ್ಮನವರಿಗೆ 1965ರ ವರ್ಷದಲ್ಲಿ ‘ಮದುವಣಗಿತ್ತಿ’ ಕೃತಿಗೆ ‘ಸೋವಿಯತ್ ಲ್ಯಾಂಡ್ ನೆಹರು’ ಪ್ರಶಸ್ತಿ, 1975ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸ್ವರಲಿಪಿ  ಪ್ರತಿಷ್ಠಾನದ  ‘ಲಿಪಿ ಪ್ರಾಜ್ಞೆ’ ಗೌರವ,  1992ರ ವರ್ಷದಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ‘ಅನುಪಮ’ ಪ್ರಶಸ್ತಿ,   ದೇಜಗೌ ಮಹಿಳಾ ಸಾಹಿತ್ಯ ಪ್ರಶಸ್ತಿ, ಚಂದ್ರಲೇಖ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿದ್ದವು.

ಕರ್ನಾಟಕ  ಲೇಖಕಿಯರ  ಸಂಘವು  ಎಚ್. ವಿ. ಸಾವಿತ್ರಮ್ಮನವರ  ಹೆಸರಿನಲ್ಲಿ  ಉತ್ತಮ ಮಹಿಳಾ  ಸಾಹಿತ್ಯ  ಸಾಧಕರಿಗೆ  ಪ್ರತೀ ವರ್ಷ ಪ್ರಶಸ್ತಿ ಗೌರವವನ್ನು ನೀಡುತ್ತಾ ಬಂದಿದೆ.  

ಎಚ್. ವಿ. ಸಾವಿತ್ರಮ್ಮನವರು  1995ರ ಡಿಸೆಂಬರ್ 27ರಂದು ಈ ಲೋಕವನ್ನಗಲಿದರು. 

ಎಚ್. ವಿ. ಸಾವಿತ್ರಮ್ಮ

(13 Oct 1913-13 May 2012)