About the Author

ಹೊಸ್ತೋಟ ಮಂಜುನಾಥ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹನ್ಮಂತಿ ಹೊಸ್ತೋಟದವರು.  ಖ್ಯಾತ ಯಕ್ಷಗಾನ ಭಾಗವತರಾದ ಹೊಸ್ತೋಟ ಮಂಜುನಾಥ ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿಧ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದರು. ತಂದೆ ಹೊಸ್ತೋಟದ ಭಾಗವತ, ತಾಯಿ- ಮಹಾದೇವಿ. ಶಿರಸಿಯಲ್ಲಿ ಆರನೇ ತರಗತಿಯವರೆಗೆ ಓದಿದ ಅವರು ಬಾಲ್ಯದಲ್ಲಿಯೇ ಹನುಮಂತಿಯ ಟೆಂಟ್ ಯಕ್ಷಗಾನ ಮೇಳದಲ್ಲಿ ಶಿವರಾಮ ಹೆಗಡೆ ಮತ್ತು ಮಹಾಬಲ ಹೆಗಡೆಯವರಲ್ಲಿ ಯಕ್ಷಗಾನ ಕಲೆಯನ್ನು ಕಲಿತರು. ಭಾಗವತಿಕೆಯನ್ನೇ ಉಸಿರಾಗಿಸಿಕೊಂಡಿದ್ದು ಕೆರೆಮನೆ ಶಿವರಾಮ ಹೆಗ್ಡೆಯವರ ಪ್ರಭಾವದಿಂದ.

ಆರಂಭದಲ್ಲಿ ಕೊಡಗಿಪಾಲ ಶಿವರಾಮ ಹೆಗ್ಡೆ ಇವರನ್ನು ರಂಗಕ್ಕೆ ತಂದಾಗ ಉತ್ಸಾಹದಿಂದ ಹಾಡುಗಾರಿಕೆ ನಡೆಸಿ ಹೆಚ್ಚಿನ ಜಿಜ್ಞಾಸೆ ಬೆಳೆಸಿಕೊಂಡು ಬಾಳೆಹದ್ದು ಕೃಷ್ಣ ಭಾಗವತ ಹಾಗೂ ಕೆರೆಮನೆ ಮಹಾಬಲ ಹೆಗ್ಡೆ ಇವರ ಶಿಷ್ಯರಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟೂ ಗಟ್ಟಿಗೊಳಿಸಿಕೊಂಡರು. ಅವರು 28 ವರ್ಷ ಕಾಲ ಅದೇ ಯಕ್ಷಗಾನ ಮೇಳಗಳಲ್ಲಿದ್ದು, ಭಾಗವಹಿಸುತ್ತಲೇ, ಆ ಕಲೆಯ ಅಭ್ಯಾಸ ಅಧ್ಯಯನ, ತರಬೇತಿ ಪಡೆದು, ಸಂಪ್ರದಾಯಕ ಯಕ್ಷಗಾನದ ಎಲ್ಲ ವಿಭಾಗಗಳಲ್ಲಿ ಪ್ರಾವೀಣ್ಯತೆ ಪಡೆದರು. ಕ್ರಮೇಣ ಭಾಗವತಿಕೆ, ನೃತ್ಯ, ಚಂಡೆ, ಮದ್ದಳೆ, ವೇಷಗಾರಿಕೆ ಮಾಡುತ್ತಾ ಬಯಲಾಟದ ಅನೇಕ ತಿರುಗಾಟಗಳನ್ನು ಮಾಡಿದ ಅನುಭವ ಇವರದು.

ರಾಮಾಯಣದ 19 ಪ್ರಸಂಗ, ಮಹಾಭಾರತದ 50 ಪ್ರಸಂಗ, ಭಾಗವತದ 20 ಪ್ರಸಂಗ, ರಾಮ ಕೃಷ್ಣ ಚರಿತೆ 27 ಪ್ರಸಂಗ, ಗೋ ಮಹಿಮಾಯಾನ 33 ಪ್ರಸಂಗ, ಮಕ್ಕಳಿಗಾಗಿ ಚೈತ್ರ ಪೂರ್ಣಿಮಾ (ಪಂಚತಂತ್ರ ಆಧರಿಸಿ), ಮ್ಯಾಕ್ ಬೆತ್ ಆಧರಿಸಿ “ಮೇಘಕೇತ”, ಆಲ್ ಇಸ್ ವೆಲ್ ದಟ್ ಎಂಡ್ಸ್ ವೆಲ್ ಆಧರಿಸಿ, ಗುಣಪನ ಕಲ್ಯಾಣ, ಹೋಮರನ ಒಡೆಸ್ಸೀ ಕಾವ್ಯವನ್ನಾಧರಿಸಿ ಉಲ್ಲಾಸ ದತ್ತ ಚರಿತ್ರೆ 3 ಪ್ರಸಂಗಗಳು, ಕಾಳಿದಾಸನ ಮೇಘದೂತ, ಶಾಕುಂತಲ, ಭಾಸನ ಯೌಗಂಧರಾಯಣ, ಉತ್ತರರಾಮ ಚರಿತೆ, ದೂತವಾಕ್ಯ, ಚಿತ್ರಪಟ ರಾಮಾಯಣ  ಸೇರಿದಂತೆ 250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಒಂದಿಲ್ಲೊಂದು ಕಡೆ ಪ್ರದರ್ಶನಗೊಳ್ಳುತ್ತಿವೆ. ಇವರ “ನಿಸರ್ಗಾನುಸಂಧಾನ” ಕನ್ನಡ ,ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಭಾರತಾದ್ಯಂತ ಪ್ರದರ್ಶನ ಕಂಡಿದೆ. 2020ರ ಜನೆವರಿ 7 ರಂದು ನಿಧನರಾದರು.

ಹೊಸ್ತೋಟ ಮಂಜುನಾಥ ಭಾಗವತ

(15 Feb 1940-07 Jan 2020)