About the Author

ಲೇಖಕ ಜೆ.ಪಿ. ದೊಡಮನಿ ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ಪಟ್ಟಣದವರು. ತೇರದಾಳದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಶ್ರೀ ಪ್ರಭುಲಿಂಗ ಹೈಸ್ಕೂಲಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದ ಅವರು, ಶ್ರೀ ಶಿವಾನಂದ ಕಾಲೇಜು, ಕಾಗವಾಡ ಹಾಗೂ ಕಲಾ ವಾಣಿಜ್ಯ ಮಹಾವಿದ್ಯಾಲಯ, ರಾಯಬಾಗದಲ್ಲಿ ಪಿ. ಯು. ಸಿ. ಹಾಗೂ 1987ರಲ್ಲಿ ಬಿ. ಎ. (ಕನ್ನಡ ಮೇಜರ್) ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಿಂದ 1989ರಲ್ಲಿ ಕನ್ನಡ ಎಂ.ಎ, 1991ರಲ್ಲಿ ಡಿಪ್ಲೋಮಾ ಇನ್ ಜೈನಾಲಜಿ, 1993ರಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನಡೆಸಿದ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ (National Level Eligibility Test) ಉತ್ತೀರ್ಣರಾಗಿ, ಡಾ. ಎಸ್. ಪಿ. ಪಾಟೀಲರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ಶರಣರ ಕುರಿತ ಕನ್ನಡ ಕಾದಂಬರಿಗಳು” ಮಹಾಪ್ರಬಂಧಕ್ಕೆ 1993ರಲ್ಲಿ ಸುವರ್ಣ ಪದಕ ಸಹಿತ ಪಿಎಚ್. ಡಿ. ಪದವಿ ಪಡೆದಿದ್ದಾರೆ.

ಕರ್ನಾಟಕ ಕಲಾ ಕಾಲೇಜು, ಧಾರವಾಡದಲ್ಲಿ ಅತಿಥಿ ಉಪನ್ಯಾಸಕರಾಗಿ 1994ರಲ್ಲಿ ಸೇವೆ  ಆರಂಬಿಸಿ, 1996ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿಂಧನೂರು ಹಾಗೂ ಐನಾಪೂರದಲ್ಲಿ ಕನ್ನಡ ಉಪನ್ಯಾಸಕರಾಗಿ 1996ರಿಂದ 2005ರವರೆಗೆ ಸೇವೆ ಸಲ್ಲಿಸಿರುವ ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಐನಾಪೂರದಲ್ಲಿ 2005ರಿಂದ 2007ವರೆಗೆ ಹಾಗೂ ಅಥಣಿಯಲ್ಲಿ 2007ರಿಂದ 2009ರವರೆಗೆ ಹಾಗೂ 2015ರಿಂದ 2017ರವರೆಗೆ ಪ್ರಾಂಶುಪಾಲರಾಗಿ ಕರ್ತವ್ಯನಿರ್ವಹಿಸಿದ್ದಾರೆ. ದ್ರಾವಿಡಿಯನ್ ವಿಶ್ವವಿದ್ಯಾಲಯ ಕುಪ್ಪಮ್ ನಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದು, ಇವರ ಮಾರ್ಗದರ್ಶನದಲ್ಲಿ ಒಬ್ಬ ವಿದ್ಯಾರ್ಥಿ ಎಮ್. ಫಿಲ್. ಪದವಿ ಪಡೆದುಕೊಂಡಿದ್ದಾನೆ.  ಪ್ರಸ್ತುತ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಜಮಖಂಡಿಯಲ್ಲಿ ಅಸೋಸಿಯೆಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ‘ಸಾವಿತ್ರಿಬಾಯಿ ಫುಲೆ’, ಜ್ಯೋತಿರಾವ ಫುಲೆ ಮತ್ತು ರೈತ ಚಳವಳಿ, ಮಹಾತ್ಮಾ ಜ್ಯೋತಿರಾವ ಫುಲೆ, ಡಾ. ಬಾಬಾಸಾಹೇಬ ಅಂಬೇಡ್ಕರರ ಹತ್ಯೆ: ಯಾರು ಏಕೆ ಮತ್ತು ಹೇಗೆ ಮಾಡಿದರು ?, ರಾಜರ್ಷಿ ಶಾಹೂ ಛತ್ರಪತಿ, ಭಾರತ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಡಾ. ಬಾಬಾಸಾಹೇಬ ಅಂಬೇಡ್ಕರ ಸಮಗ್ರ ಜೀವನ ಚರಿತ್ರೆ ಕೃತಿಗಳನ್ನು ಅನುವಾದಿಸಿದ್ದಾರೆ. ಜೊತೆಗೆ  ಸಂಶೋಧನಾ ಮಹಾಪ್ರಬಂಧ ‘ಶರಣರ ಕುರಿತ ಕನ್ನಡ ಕಾದಂಬರಿಗಳು’, ಕವನ ಸಂಕಲನ ‘ಪ್ರತಿಧ್ವನಿ’ ಸ್ವರಚನೆಯ ಕೃತಿಗಳಾಗಿದ್ದು, ವಿವಿಧ ಲೇಖಕರೊಂದಿಗೆ ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಹಲವು ಲೇಖನ, ಬರೆಹಗಳು ಶಾಲಾ-ಕಾಲೇಜುಗಳಲ್ಲಿ ಪಠ್ಯಗಳಾಗಿವೆ. ಅಲ್ಲದೇ ಸುಮಾರು 60ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು, ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2020ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ, 2013 ರಲ್ಲಿ ಕೇಂದ್ರ ಸಾಹಿತ್ಯ ಅನುವಾದ ಅಕಾಡೆಮಿ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ 2012ರಲ್ಲಿ ‘ಶ್ರೀಮತಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿನಿಧಿ ಪ್ರಶಸ್ತಿ’ ಗದಗದ ದಲಿತ ಸಾಹಿತ್ಯ ಪರಿಷತ್ತಿನಿಂದ 2012ರಲ್ಲಿ ‘ಪುಸ್ತಕ ಪ್ರಶಸ್ತಿ’, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ 2009ನೇ ಸಾಲಿನ ‘ಶ್ರೀಮತಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿನಿಧಿ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಜೆ. ಪಿ. ದೊಡಮನಿಯವರ ಲೇಖನಗಳನ್ನು ಆಧರಿಸಿ ಸತ್ಯಶೋಧಕ ಮಹಾತ್ಮ ಜ್ಯೋತಿರಾವ ಫುಲೆ ಡಾಕ್ಯುಮೆಂಟರಿ ಸಿನೆಮಾ ಸಹ ಬಿಡುಗಡೆಯಾಗಿದೆ.


 

ಜೆ.ಪಿ. ದೊಡಮನಿ

(01 May 1964)