About the Author

ಕಪಟರಾಳ  ಕೃಷ್ಣರಾಯರು ಸಾಹಿತಿ, ಸಂಶೋಧಕ,  ಸ್ವಾತಂತ್ಯ್ರ ಹೋರಾಟಗಾರ ಹಾಗೂ ಸಮಾಜ ಸೇವಕರಾಗಿದ್ದವರು. ಸುರಪುರ ಬಳಿಯ ಹಾಲಗಡಲಿ ಎಂಬ ಹಳ್ಳಿಯಲ್ಲಿ ದಿನಾಂಕ 3, ಡಿಸೆಂಬರ್ 1889 ರಲ್ಲಿ ಜನಿಸಿದರು. ಸುರಪುರದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದ ಕಪಟರಾಳರು ಮಿಡಲ್ ಪರೀಕ್ಷೆಯವರೆಗೂ ಸುರಪುರದಲ್ಲಿಯೇ ಓದಿದರು. ಸರ್ಕಾರಿ ಶಾಲೆಗೆ ಸೇರಿದ ಇವರು ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರು. ಜೊತೆಯಲ್ಲಿ ಪಾರ್ಸಿ ಭಾಷೆಯನ್ನು ಕಲಿತರು. ಮೆಟ್ರಿಕ್ ಅಭ್ಯಾಸಕ್ಕೆ ಹೈದರಾಬಾದ್ ಗೆ ಹೋದರು. ಕ್ರಿ.ಶ. 1910ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪೂರೈಸಿದರು.  ಮನೆಪಾಠವನ್ನು ಹೇಳಿ ತಮ್ಮ ವಕೀಲಿ ಪರೀಕ್ಷೆಗೆ ತಯಾರಾದರು. ನಂತರ ಪೂನಾಕ್ಕೆ ತೆರಳಿ ವಕಾಲತ್ ಪರೀಕ್ಷೆಯನ್ನು ಮುಗಿಸಿಕೊಂಡು ಕಲಬುರ್ಗಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. 

ಮಹಾರಾಷ್ಟ್ರದ ಪ್ರಭಾವಕ್ಕೆ ಸಿಕ್ಕು ಮರಾಠಿ ಭಾಷೆ  ಅತ್ಯಂತ ಪ್ರಬಲವಾಗಿರುವಾಗ ಕಲಬುರ್ಗಿಯಲ್ಲಿ ಕನ್ನಡವನ್ನು  ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಿದ ಕೆಲವು ಮಹನೀಯರಲ್ಲಿ ಕಪಟರಾಳ ಕೃಷ್ಣರಾಯರು ಒಬ್ಬರು. ಕಲಬುರ್ಗಿಯಲ್ಲಿ ಇತರ ಭಾಷೆಗಳ ಪ್ರಾಬಲ್ಯದಿಂದಾಗಿ ಕನ್ನಡಕ್ಕೆ ಬಂದೊದಗಿದ ಅಧೋಗತಿಗೆ ಕಪಟರಾಳರು  ಕನ್ನಡದ ಸಂಘಟನೆ, ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು.ಕನ್ನಡ ಸಾಹಿತ್ಯ ಸಂಘದ ಕ್ರೀಯಾಶೀಲ ಸದಸ್ಯರಾಗಿ ವೈಭವದಿಂದ ನಾಡಹಬ್ಬಗಳನ್ನು ಸಂಘಟಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪ್ರಚೋದನೆಯನ್ನು ಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರಾಗಿ ಕನ್ನಡ ಪರ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಮರಾಠಿ ಮತ್ತು ಉರ್ದು ಮಾಧ್ಯಮಗಳ ಕಪಿಮುಷ್ಠಿಯಲ್ಲಿ ಸಿಲುಕಿದ ಕನ್ನಡವನ್ನು ಹೊರತಂದ ಕೀರ್ತಿ ಕಪಟರಾಳರಿಗೆ ಸಲ್ಲುತ್ತದೆ. ಕೇವಲ, ಸಂಘ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಕನ್ನಡ ಭಾಷೆ ಶ್ರೀಮಂತವಾಗಲಾರದು ಎಂಬ ಸತ್ಯವನ್ನು ಮನಗಂಡ ಕೃಷ್ಣರಾಯರು ಕನ್ನಡ ಸಾಹಿತ್ಯದ ಕೃಷಿಯಲ್ಲಿ ಮುಖ್ಯವಾಗಿ ಸಂಶೋಧನೆಯ ಮಾರ್ಗದಲ್ಲಿ ಸಾಗುತ್ತ, ಕನ್ನಡ ಸಾಹಿತ್ಯದ ಇತಿಹಾಸದ ಮೇಲೆ ಹೊಸ ಬೆಳಕನ್ನು ಬೀರಬಲ್ಲ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಕಾಣಿಕೆಯಾಗಿ ನೀಡಿದರು. 

ಕಪಟರಾಳರು ಇತಿಹಾಸಕ್ಕೆ ಸಂಬಂಧಿಸಿದಂತೆ ಮೂರು ಸಂಶೋಧನಾ ಗ್ರಂಥಗಳನ್ನು ಬರೆದಿದ್ದಾರೆ. ನಾಡ-ನುಡಿಯ ಇತಿಹಾಸ, ಕರ್ನಾಟಕ ಕಲಾಕುಳ ಶೈವರ ಇತಿಹಾಸ, ಸುರಪುರ ಸಂಸ್ಥಾನದ ಇತಿಹಾಸ. ಇವರು ಸುಮಾರು 38  ಸಂಶೋಧನಾ ಲೇಖನಗಳನ್ನು  ಬರೆದಿದ್ದು ಅವು ವಿವಿಧ ಪತ್ರಿಕೆಗಳಲ್ಲಿ, ಮಾಸಪತ್ರಿಕೆಗಳಲ್ಲಿ, ಹಾಗೂ ಪ್ರಬುದ್ಧ ಕರ್ನಾಟಕ,  ಕರ್ಮವೀರ ಜಯಕರ್ನಾಟಕ,  ಶರಣ ಸಾಹಿತ್ಯ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 

ಕಪಟರಾಳ ಕೃಷ್ಣರಾಯರು

(03 Dec 1889)