About the Author

ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದವರಾದ ಕಿರಣ್ ಗಿರ್ಗಿ (1992) ಸೃಜನಶೀಲ ರಂಗ ನಿರ್ದೇಶಕ, ನಟ, ಸಂಗೀತ ಸಂಯೋಜಕ ಹಾಗೂ ಕವಿ. 'ನ್ಯಾಣ' ಕವಿತೆಗಳು ಇವರ ಚೊಚ್ಚಲ ಸಾಹಿತ್ಯ ಕೃತಿ. ಕಿರಣ್ ಕುಮಾರ್ ಎಸ್.ಕೆ. ಎಂಬುದು ಇವರ ಮೂಲ ಹೆಸರಾಗಿದ್ದರೂ ಕಿರಣ್ ಗಿರ್ಗಿ ಅಂತಲೇ ಚಿರಪರಿಚಿತರು. ಶಿಕ್ಷಣದಲ್ಲಿ ಡಿಪ್ಲೋಮಾ (ಡಿ.ಎಡ್.) ವಿದ್ಯಾರ್ಹತೆ ಹೊಂದಿದ ಇವರು ಮೈಸೂರಿನ "ಭಾರತೀಯ ರಂಗ ಶಿಕ್ಷಣ ಕೇಂದ್ರ-ರಂಗಾಯಣ"ದಲ್ಲಿ 2012-13ನೇ ಸಾಲಿನ ರಂಗಾಭ್ಯಾಸಿಯಾಗಿ 'ಡಿಪ್ಲೊಮಾ ಇನ್ ಥಿಯೇಟರ್ ಎಜುಕೇಷನ್' ಕೋರ್ಸ್ ಮುಗಿಸಿ ರಂಗಾಯಣದ ಕಿರಿಯ ಕಲಾವಿದರಾಗಿ, ತಂತ್ರಜ್ಞರಾಗಿ ಕೆಲಸ ನಿರ್ವಹಿಸಿದ್ದಾರೆ. 'ಕೋಳಿ ಎಸ್ರು', 'ಚಿರತೆ ಬಂತು ಚಿರತೆ',  'ಧರೆಗೆ ದೊಡ್ಡವರು ಮಂಟೇಸ್ವಾಮಿ-ಬಂಡಾಯದೊಡೆಯ' ಚಲನಚಿತ್ರಗಳಲ್ಲಿ ಹಾಗೂ ಸಂಕ್ರಾಂತಿ, ಭಗದಜ್ಜುಕೀಯಂ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಹ್ಹ...!!!, ವೆನಿಸ್ಸಿನ ವ್ಯಾಪಾರ, ಗೊಂಬೆ, ಸಧ್ಯಕ್ಕಿದು ಹುಚ್ಚರ ಸಂತೆ, ಕಂಸಾಯಣ, ರತ್ನ ಮಾಂಗಲ್ಯ, ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಪ್ರಶಂಸೆ ಗಳಿಸಿದ್ದಾರೆ.

'ರಂಗಶಂಕರ ಬೆಂಗಳೂರು' 2018ರಲ್ಲಿ ಆಯೋಜಿಸಲಾಗಿದ್ದ 'ರಂಗ ನಿರ್ದೇಶನ ತರಬೇತಿ'ಯನ್ನು ಪಡೆಯಲಾಗಿದ್ದು, ಜೋಕುಮಾರಸ್ವಾಮಿ, ಮಲ್ಲಮ್ಮನ ಮನೇ ಹೋಟ್ಲು, ಕಂಡಾಯದ ಕೋಳಿ, ಮಧ್ಯಮ ವ್ಯಾಯೋಗ, ದ ಪೇಯಿಂಗ್ ಗೆಸ್ಟ್, ವಿದೂಷಕ, ಕತ್ತೆ ಮತ್ತು ಧರ್ಮ, ಕುದುರೆ ಮೊಟ್ಟೆ, ನಾಳೆ ಬನ್ನಿ, ಶ್ರೀ ಕೃಷ್ಣ ಗಾರುಡಿ, ಒಗಟಿನ ರಾಣಿ, ಗಿಡ್ಡೂ ಟೇಲರನ ಸಾಹಸಗಳು, ಕುಣಿ ಕುಣಿ ನವಿಲೇ, ಬೆಟ್ಟಕ್ಕೆ ಚಳಿಯಾದರೆ, ಪುಣ್ಯಕೋಟಿ, ಪ್ಲಾಸ್ಟಿಕ್ ರಾಕ್ಷಸ, ಬಾ ಬಾ ಮಳೆರಾಯ, ಸ್ನೇಹದ ಬಲ, ಮುಂತಾದ ನಾಟಕಗಳು ಇವರ ನಿರ್ದೇಶನದಲ್ಲಿ ಚಾಮರಾಜನಗರ ಹಾಗೂ ಮೈಸೂರು ರಂಗತಂಡಗಳ ಕಲಾವಿದರಿಂದ ಪ್ರಯೋಗಗೊಂಡಿವೆ. 

ಮೈಸೂರಿನ ಅರಿವು ಶಾಲೆಯಲ್ಲಿ, ಚಾಮರಾಜನಗರದ ಎಂ.ಸಿ.ಎಸ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಚಾಮರಾಜನಗರದ 'ದೀನಬಂಧು ಶಾಲೆ'ಯಲ್ಲಿ ಶಿಕ್ಷಕ ವೃತ್ತಿ ಮುಂದುವರೆಸುತ್ತಿರುವುದಲ್ಲದೇ 'ಅಭ್ಯಾಸಿ ಟ್ರಸ್ಟ್ ' ಎಂಬ ತಂಡವನ್ನು ಪ್ರಾರಂಭಿಸಿ ಸಾಹಿತ್ಯ, ರಂಗಭೂಮಿ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 

ಮೈಸೂರಿನ 'ನಿನಾದ ಸಂಗೀತ ಶಾಲೆ'ಯಲ್ಲಿ ಸಂಗೀತ ನಿರ್ದೇಶಕರಾದ ಎ.ಎಸ್. ಪ್ರಸನ್ನಕುಮಾರ್ ಅವರಿಂದ 'ಮ್ಯೂಸಿಕಲ್ ಕೀಬೋರ್ಡ್ ವಾದನ' ತರಬೇತಿ ಪಡೆದಿದ್ದು, ತಾವು ನಿರ್ದೇಶಿಸಿದ ನಾಟಕಗಳಿಗೆ ಮತ್ತು ಚಾಮರಾಜನಗರ ಜಿಲ್ಲೆಯ ಕವಿಗಳ ಆಯ್ದ ಕವಿತೆಗಳಿಗೆ ಸಂಗೀತ ಸಂಯೋಜಿಸಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಲಾಗಿದೆ. 

ಇವರ ರಂಗಭೂಮಿ, ಸಾಹಿತ್ಯ, ಸಂಗೀತ ಕ್ಷೇತ್ರದ ಸೇವೆಯನ್ನು ಗುರುತಿಸಿ "ಚಾಮರಾಜನಗರ ಜಿಲ್ಲೆಯ ಹೆಮ್ಮೆಯ ಕನ್ನಡಿಗರು" ಎಂದು ವಿಜಯ ಕರ್ನಾಟಕ ದಿನಪತ್ರಿಕೆಯು 2020 ನವೆಂಬರ್ ತಿಂಗಳಿನಲ್ಲಿ ಕಿರಣ್ ಗಿರ್ಗಿ ಅವರನ್ನು ಗೌರವಿಸಿದೆ.

ಕಿರಣ್ ಗಿರ್ಗಿ

Stories/Poems