About the Author

1924 ರಲ್ಲಿ ಜನಿಸಿದ ಕೃಷ್ಣ ಶ್ರೀಪಾದ ದೇಶಪಾಂಡೆ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಎಂ.ಎ. ಪದವಿಯನ್ನೂ, ಗ್ರಂಥಪಾಲನದಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದರು. ಅಮೆರಿಕನ್ ಲೈಬ್ರರಿ ಅಸೋಸಿಯೇಷನ್‌ನಿಂದಲೂ ಗೌರವ ಡಿಪ್ಲೋಮಾ ಪಡೆದಿದ್ದಾರೆ. ತಮ್ಮ ಮೂವತ್ತೈದನೇ ವಯಸ್ಸಿಗೇ ಮಧ್ಯೆ ಅಮೇರಿಕಾ, ಬ್ರಿಟನ್, ಫ್ರಾನ್ಸ್, ಸ್ವಿಟ್ಟರ್ಲೆಂಡ್ ಹಾಗೂ ಇಟಲಿ ದೇಶಗಳಿಗೆ ಪ್ರವಾಸ ಮಾಡಿ ಅಲ್ಲಿನ ಪ್ರಮುಖ ಗ್ರಂಥಾಲಯಗಳನ್ನು ಸಂದರ್ಶಿಸಿದ್ದಾರೆ. 1951 ರಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದರು. ಈ ಮಧ್ಯೆ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಗ್ರಂಥಪಾಲರೂ, ಗ್ರಂಥಾಲಯ ವಿಜ್ಞಾನ ವಿಭಾಗದ ಗೌರವ ಪ್ರಾಧ್ಯಾಪಕರೂ ಆಗಿ ಕೆಲಸ ಮಾಡಿದ ಅನುಭವ ಇವರದು. ಗೋವಾ, ದಾಮನ್, ದಿಯೂ ಪ್ರದೇಶಗಳಲ್ಲಿ ಒಂದು ಗ್ರಂಥಾಲಯ ಜಾಲವನ್ನು ರೂಪಿಸುವ ಬಗ್ಗೆ ನೇಮಿತವಾದ ಸಮಿತಿಯ ಅಧ್ಯಕ್ಷರಾಗಿ ವರದಿ ಸಲ್ಲಿಸಿದ್ದರು. ಜೊತೆಗೆ, ಕ್ಯಾಲಿಕಟ್, ಶಿವಾಜಿ ಹಾಗೂ ಮರಾಠವಾಡ ವಿಶ್ವವಿದ್ಯಾನಿಲಯಗಳ ಗೌರವ ಪ್ರಾಧ್ಯಾಪಕರಾಗಿಯೂ, ಪಿಎಚ್‌ಡಿ ಅಭ್ಯರ್ಥಿಗಳಿಗೆ ನಿರ್ದೇಶಕರಾಗಿಯೂ ತೊಡಗಿಕೊಂಡಿದ್ದರು. ಗ್ರಂಥಾಲಯ ವಿಜ್ಞಾನದ ಎಲ್ಲ ಮುಖಗಳಲ್ಲೂ ಆಳವಾದ ಚಿಂತನೆ ನಡೆಸಿರುವ ದೇಶಪಾಂಡೆ ಅವರು ಆ ವಿಚಾರಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚಿನ ಲೇಖನಗಳನ್ನು ಬರೆದಿದ್ದಾರೆ, ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಸಿದ್ದ ಎರಡು ನಿಯತಕಾಲಿಕೆಗಳಾದ `ಟೈಮ್ಲೆಸ್ ಫೆಲೋಷಿಪ್ʼ ಹಾಗೂ ʻಜರ್ನಲ್‌ ಆಫ್‌ ಲೈಬ್ರರಿ ಡೆವೆಲಾಪ್‌ಮೆಂಟ್‌ʼನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.

 ಇಂಡಿಯನ್ ಲೈಬ್ರೆರಿ ಅಸೋಸಿಯೇಷನ್, ಕರ್ನಾಟಕ ವಿದ್ಯಾವರ್ಧಕ ಸಂಘ, ಇಂಡಿಯನ್ ಸ್ಟಾಂಡರ್ಡ್ಸ್ ಅಸೋಸಿಯೇಷನ್, ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್, ಮೈ.ವಿ. ಕನ್ನಡ ಗ್ರಂಥ ಸೂಚಿಯ ಸಂಪಾದಕ ಮಂಡಳಿ ಮೊದಲಾದ ಹಲವು ಸಂಘ ಸಂಸ್ಥೆಗಳ ಹಾಗೂ ವಿದ್ವನ್ ಮಂಡಳಿಗಳ ಸದಸ್ಯರಾಗಿಯೂ ಸಕ್ರಿಯರಾಗಿದ್ದರು.

 ಇವರು 2018 ಆಗಸ್ಟ್‌ 4 ರಂದು ಧಾರವಾಡದಲ್ಲಿ ನಿಧನರಾದರು.

ಕೃಷ್ಣ ಶ್ರೀಪಾದ ದೇಶಪಾಂಡೆ

(05 May 1924-04 Aug 2018)