About the Author

ಕನ್ನಡದ ವಿಶಿಷ್ಟ ಕಾದಂಬರಿಕಾರ ಕುಸುಮಾಕರ ದೇವರಗೆಣ್ಣೂರ ಅವರ ಮೂಲ ಹೆಸರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಸಂತ ಅನಂತ ದಿವಾಣಜಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. 1956ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡದ ಕವಿ ದಾ.ರಾ.ಬೇಂದ್ರೆ ಅವರ ನಿಕಟ ಸಂಪರ್ಕ ವಸಂತ ದಿವಾಣಜಿ ಅವರಿಗೆ ಸುಮಾರು 12 ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಸಿಕ್ಕಿತ್ತು. ಸೊಲ್ಲಾಪುರಕ್ಕೆ ಬಂದೊಡನೆ ಮಾಡಿದ ಮೊದಲ ಕೆಲಸ ಬೇಂದ್ರೆಯವರನ್ನು ಕಂಡದ್ದು. ಅಂದಿನಿಂದ ಅಂದರೆ 1944ರಿಂದ 1956ರವರೆಗೆ ಹನ್ನೆರಡು ವರ್ಷಗಳ ಒಂದು ಗಡುವನ್ನು ಬೇಂದ್ರೆಯವರ ನಿಕಟ ಸಾನಿಧ್ಯದಲ್ಲಿ ಕಳೆದಿದ್ದಾರೆ. ತೀರ ಹತ್ತಿರದವನಾಗಿ ಅವರ ಮನೆಯಲ್ಲಿ ಒಬ್ಬರಾಗಿ ಬೆಳೆದವರಾಗಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದ ಅವರು 2012ರಲ್ಲಿ ನಿಧನರಾದರು. 

ಅನೇಕ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಇವರು ಕನ್ನಡದಲ್ಲಿ 5 ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕೃತಿಗಳು - ನಾಲ್ಕನೆಯ ಆಯಾಮ, ನಿರೀಂದ್ರಿಯ, ಪರಿಘ,ಬಯಲು-ಬಸಿರು,ದುರ್ದಮ್ಯ(ಮರಾಠಿಯಿಂದ ಕನ್ನಡಕ್ಕೆ ಅನುವಾದ), ಕಾವ್ಯ:- ಸ್ವಪ್ನನೌಕೆ. ಅವರ ಪಿ.ಎಚ್ ಡಿ. ಮಹಾಪ್ರಬಂಧ :- ಪ್ರಸಾದ ಯೋಗ (ಪುರಂದರ ದಾಸರನ್ನು ಕುರಿತು), ಸಾಹಿತ್ಯ ವಿಮರ್ಶೆ:- ಗಾಳಿ ಹೆಜ್ಜೆ ಹಿಡಿದ ಸುಗಂಧ, 1955 ರಲ್ಲಿ ‘ನಾಲ್ಕನೆಯ ಆಯಾಮ’ ಕಾದಂಬರಿ ಪ್ರಕಟ, ‘ನಿರೀಂದ್ರಿಯ’ ಕಾದಂಬರಿ, ‘ಬಯಲು-ಬಸಿರು’, ಗೌರವ ಗ್ರಂಥ:-ಅವಗಾಹ. ಕುಸುಮಾಕರ ದೇವರಗೆಣ್ಣೂರ ಅವರ ಸಾಹಿತ್ಯ ಸಾಧನೆಗೆ 2006 ರಲ್ಲಿ ಸತ್ಯಕಾಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ 2003, ಮುಂಬೈನ ಗುರುನಾರಾಯಣ ಪ್ರಶಸ್ತಿ, ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು  ಲಭಿಸಿದೆ. 

ಕುಸುಮಾಕರ ದೇವರಗಣ್ಣೂರ (ವಸಂತ ಅನಂತ ದಿವಾಣಜಿ)

(15 Feb 1930-17 Apr 2012)

Awards