About the Author

ಕಾದಂಬರಿಕಾರ, ಕವಿ, ಅಂಕಣಕಾರ, ಮತ್ತು ಅನುವಾದಕರಾಗಿ ಎಂ ಆರ್ ದತ್ತಾತ್ರಿ ಯವರು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂಲದ ಊರು ಚಿಕ್ಕಮಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯ ರಿಂಗ್ ಪದವಿ ಪಡೆದು ಕೆಜಿಎಫ್, ಪುಣೆ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಧನೆಗಳ ಕೀರ್ತಿ ದತ್ತಾತ್ರಿಯವರದ್ದಾಗಿದೆ. ಇಆರ್‌ಪಿ ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೆಲಸ ಮಾಡಿದ ಅನುಭವವು ಅವರದ್ದು. ಅಮೆರಿಕ ಮತ್ತು ಭಾರತದ ಅನೇಕ ಕಂಪನಿಗಳಿಗೆ ಟೆಕ್ನಾಲಜಿ ಮತ್ತು ಪ್ರಾಜಕ್ಟ್ ಮ್ಯಾನೇಜ್‌ಮೆಂಟ್ ಅಡ್ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ, ತತ್ವಶಾಸ್ತç, ಮತ್ತು ಪ್ರವಾಸ ದತ್ತಾತ್ರಿಯವರ ಮೆಚ್ಚಿನ ಪ್ರವೃತ್ತಿ ಕ್ಷೇತ್ರಗಳು. ಪ್ರಪಂಚದ ಅನೇಕ ದೇಶಗಳನ್ನು ಸುತ್ತಾಡಿದ ಅನುಭವವು ಅವರಿಗಿದೆ.

ಅಲೆಮಾರಿ ಕನಸುಗಳು (ಕವನ ಸಂಕಲನ, 2002) ದತ್ತಾತ್ರಿಯವರ ಮೊದಲ ಪ್ರಕಟಿತ ಕೃತಿ. ಪೂರ್ವ-ಪಶ್ಚಿಮ (ಅಂಕಣ ಬರಹಗಳ ಸಂಗ್ರಹ, 2006), ದ್ವೀಪವ ಬಯಸಿ (ಕಾದಂಬರಿ, 2011), ಮಸುಕುಬೆಟ್ಟದ ದಾರಿ (ಕಾದಂಬರಿ, 2014), ತಾರಾಬಾಯಿಯ ಪತ್ರ (ಕಾದಂಬರಿ, 2018), ಟಿಯರ್‌ಡ್ರಾಪ್ಸ್ - ಸೆಲೆಕ್ಟೆಡ್ ಪೊಯೆಮ್ಸ್ ಆಫ್ ಎಚ್.ಎಸ್. ವೆಂಕಟೇಶಮೂರ್ತಿ (ಸಂಪಾದನೆ ಮತ್ತು ಕೆಲವು ಕವಿತೆಗಳ ಅನುವಾದ, ಇಂಗ್ಲಿಷ್, 2021) ಇವರ ಪ್ರಕಟಿತ ಪುಸ್ತಕಗಳು. ತಾರಾಬಾಯಿಯ ಪತ್ರ ತೆಲುಗಿಗೆ ಅನುವಾದಗೊಂಡು ಮನ್ನಣೆಯನ್ನು ಪಡೆದಿದೆ ಹಾಗೂ ಇಂಗ್ಲಿಷ್‌ನಲ್ಲಿ ಪ್ರಕಟನೆಯ ಹಂತದಲ್ಲಿದೆ.

ದತ್ತಾತ್ರಿಯವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ. ಹಾ.ಮಾ. ನಾಯಕ ಪ್ರಶಸ್ತಿ (2006), ಸೂರ್ಯನಾರಾಯಣ ಚಡಗ ಪ್ರಶಸ್ತಿ (2012), ಸೇಡಂನ ಅಮ್ಮ ಪ್ರಶಸ್ತಿ (2012), ಡಾ. ನರಹಳ್ಳಿ ಪ್ರಶಸ್ತಿ (2017), ಮತ್ತು ಮಾಸ್ತಿ ಕಾದಂಬರಿ ಪುರಸ್ಕಾರ (2019) ಗೌರವಗಳಿಗೆ ಭಾಜನರಾಗಿದ್ದಾರೆ.

`ಒಂದೊಂದು ತಲೆಗೂ ಒಂದೊಂದು ಬೆಲೆ' ದತ್ತಾತ್ರಿಯವರ ನಾಲ್ಕನೇ ಕಾದಂಬರಿ. ನಗರ ಜೀವನದ ಚಿತ್ರಣ ಮತ್ತು ಆಧುನಿಕ ಬದುಕಿನ ಭಾವಸೂಕ್ಷ್ಮಗಳು ಎಂ.ಆರ್. ದತ್ತಾತ್ರಿಯವರ ಕಾದಂಬರಿಗಳ ವಿಶೇಷ.
 

ಎಂ.ಆರ್‌. ದತ್ತಾತ್ರಿ