About the Author

ಮಹದೇವ ಬಣಕಾರರು ಧಾರವಾಡ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ದಿನಾಂಕ ಅಕ್ಟೋಬರ್ 3, 1932ರಲ್ಲಿ ಹುಟ್ಟಿದರು. ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ಜಾಸ್ತಿ. ಎಮ್ಮೆ ಕಾಯುವಾಗ ಕಟ್ಟಿದ ಹಾಡು, ವಚನ ರೂಪದ ಹಾಡುಗಳು ಸೇರಿ, 18ರ ಹರೆಯದಲ್ಲಿಯೇ ಪ್ರಕಟಿಸಿದ ಕವನ ಸಂಕಲನ ‘ಕಾವ್ಯೋದಯ’. ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದಿದ್ದರು.   

‘ಗೀಯ ಗೀಯ ಗಾ ಗಿಯ ಗೀಯ ನಾವು ಬಂದೇವ, ನಾವು ಬಂದೇವ ನಾವು ಬಂದೇವ ಶ್ರೀಶೈಲ ನೋಡಲಿಕ್ಕ ಸ್ವಾಮಿ ಸೇವಾ ಮಾಡಿಬಂದು ಹೋಗಲಿಕ್ಕ’ ಈ ಹಾಡು ಬರೆದವರು ಮಹಾದೇವರೆ.  ಬಡತನ ಬುತ್ತಿಯ ಗಂಟ ಬಾಯಿಯಲಿ ಕಚ್ಚಿಕೊಂಡು ಹಳ್ಳವ ಸೇರಿದ ನಾಯಿ ದಡದ ಮೇಲಿಂದ ಇಟುಕಿ, ನೀರಿನಲಿ ತನ್ನ ಪ್ರತಿಬಿಂಬವ ಕಂಡು, ಬೊಗಳಿದಂತಾಯಿತ್ತಯ್ಯಾ ಎನ್ನಿರವು! ಇದು 1108 ವಚನಗಳನ್ನುಳ್ಳ 'ಮಹಾದೇವ ಬಣಕಾರರ ವಚನಗಳು' ಎಂಬ ಕೃತಿಯ ಒಂದು ವಚನ ಹೀಗೆ ಇವರ ಸಾಹಿತ್ಯ ತುಂಬಾ ಪ್ರಭಾವಶಾಲಿಯಾಗಿದೆ. ಪತ್ರಿಕೋದ್ಯಮಿಯಾಗಿಯೂ ಕಾರ್ಯನಿರ್ವಹಿಸಿದವರು. ‘ಜಾಗೃತಿ’ ಎಂಬ ಪತ್ರಿಕೆ ಆರಂಭಿಸಿದರು.

ಕೃತಿಗಳು: ಕವಿ. ಕಾವ್ಯೋದಯ, ಬಣ್ಣದ ಕಾರಂಜಿ, ಅಪರಂಜಿ, ಹೊಸಹುಟ್ಟು ಬಣಕಾರರ ಕಾವ್ಯಕೃತಿಗಳು. ಗರತಿಯ ಗೋಳು, ಕಲ್ಯಾಣ ಕ್ರಾಂತಿ, ಯಾರು ಹೊಣೆ, ಉರಿಲಿಂಗ ಪೆದ್ದಿ, ತಿಂದೋಡಿ, ತೂಗಿದ ತೊಟ್ಟಿಲು, ಹೊಸ್ತಿಲು ದಾಟಿದ ಹೆಣ್ಣು, ದುಡ್ಡೇ ದೇವರು ಮೊದಲಾದವು ನಾಟಕಗಳು. ಲೋಕದ ಕಣ್ಣು, ಮಾದನ ಮಗ ಮತ್ತು ಇತರ ಕಥೆಗಳು -ಇವು ಕಥಾ ಸಂಕಲನಗಳು. ಬಣಕಾರರು ಭಾಷೆ ಮತ್ತು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ – ಮಹಾರಾಷ್ಟ್ರ ಮಹಾಜನ್‌ ವರದಿ ವಿಶ್ಲೇಷಣೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗದು, ಕಾಸರಗೋಡು ಕೇರಳಕ್ಕೆ ಉಳಿಯದು, ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ (ಇಂಗ್ಲಿಷನಲ್ಲೂ ಕೂಡಾ) ಕರ್ನಾಟಕ ಉಜ್ವಲ ಪರಂಪರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಬಣಕಾರರ ಮೇರು ಕೃತಿಗಳಲ್ಲಿ 1108 ವಚನಗಳ ‘ಮಹದೇವ ಬಣಕಾರರ ವಚನಗಳು’, ‘ವಿಶ್ವಬಂಧು ಮರುಳ ಸಿದ್ಧ’ ಮತ್ತು ‘ಶ್ರೀ ಶಿವಕುಮಾರ ಚರಿತೆ’ ಸೇರಿವೆ. ಶ್ರೀಮರುಳ ಸಿದ್ಧ ಕಾವ್ಯವು ಈ ಶತಮಾನದ ಮಹಾಕಾವ್ಯವೆಂದೇ ಪರಿಗಣಿಸಲ್ಪಟ್ಟಿದೆ. ಮತ್ತೊಂದು ಮಹೋನ್ನತ ಕೃತಿ ಎಂದರೆ 700 ಪುಟಗಳ ಬೃಹತ್‌ ಗ್ರಂಥ ‘ಆಂಗ್ಲರ ಆಡಳಿತದಲ್ಲಿ ಕನ್ನಡ’. ಯಾವೊಂದು ಸಂಸ್ಥೆ, ವಿಶ್ವವಿದ್ಯಾಲಯದ ಸಹಾಯವೂ ಇಲ್ಲದೆ ಬಣಕಾರರು ಏಕಾಂಗಿಯಾಗಿ ರಚಿಸಿದ ಕೃತಿ ಇದಾಗಿದೆ. ಈ ಸಂಶೋಧನ ಕೃತಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು ಎಂದು ಸಂಶೋಧಕರಾದ ಶಂಬಾ ಜೋಶಿ ಮತ್ತು ಅಂಕಣಕಾರ ಹಾ.ಮಾ. ನಾಯಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಬಣಕಾರರ ಕೆಲ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯವಾಗಿಯೂ ಮೂಡಿಬಂದಿವೆ. 

ಹೊಣೆಗಾರಿಕೆ ನಿರ್ವಹಣೆ: 14 ವರ್ಷ ವಯಸ್ಸಿನಲ್ಲಿಯೇ ಮೈಸೂರು ಚಲೋ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಕನ್ನಡ ನಾಡು – ನುಡಿ, ಗಡಿ – ನೆಲ – ಜಲ ಸಂರಕ್ಷಣೆಯ ಚಳವಳಿಗಳಲ್ಲಿ BAಗವಹಿಸಿದ್ದಲ್ಲದೆ ಬೆಳಗಾವಿ, ಕಾಸರಗೋಡು, ತಾಳವಾಡಿ ಫಿರ್ಕಾ, ಪಾವಗಡ, ಮಧುಗಿರಿ ನಿಪ್ಪಾಣಿ ಮುಂತಾದ ಗಡಿ ಭಾಗಗಳಲ್ಲೆಲ್ಲಾ ಸಂಚರಿಸಿ ಗಡಿಭಾಗದ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿದ್ದರು. ವಿಧಾನ ಸಭಾ ಸದಸ್ಯರಾಗಿ ಚುನಾಯಿತರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸದಸ್ಯರಾಗಿ, ರಾಜ್ಯ ಪತ್ರಾಗಾರ, ಪ್ರಾದೇಶಿಕ ಸಮೀಕ್ಷಾ ಸಮಿತಿ ಮತ್ತು ಕನ್ನಡ ಭಾಷಾಂತರ ಸರಳೀಕರಣ ಸಮಿತಿ ಸದಸ್ಯರೂ ಆಗಿದ್ದರು. 

ಪ್ರಶಸ್ತಿ-ಗೌರವಗಳು: ಬಣಕಾರರ ಚೊಚ್ಚಲ ಕೃತಿ- ಕಾವ್ಯೋದಯಕ್ಕೆ ಮುಂಬಯಿ ಸರಕಾರದ ಬಹುಮಾನ, ತಮ್ಮಣ್ಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಗೌರವಗಳು ಸಂದಿದ್ದವು.  ಅವರು 2001ರ ನವೆಂಬರ್ 17ರಂದು ನಿಧನರಾದರು 

ಮಹಾದೇವ ಬಣಕಾರ

(03 Oct 1932-17 Nov 2001)