About the Author

ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್‌ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ.

‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ  ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

‘ಮೈನಾಕಾಲಂ’, ‘ಅಕ್ಷರಲೋಕದ ನಕ್ಷತ್ರ’, ‘ನಗರ ನಾಯಕರು‘, ‘ಮರೆಯಲಿ ಹ್ಯಾಂಗ’, ‘ಚೀಫ್ ಗೆಸ್ಟ್’ ಮುಂತಾದ ಅಂಕಣಗಳಿಗೆ ಕರ್ತೃ. ಗುಲಬರ್ಗಾ ವಿಶ್ವ ವಿದ್ಯಾಲಯದ ದಿ.ಜಯತೀರ್ಥ ರಾಜ ಪುರೋಹಿತ ಕಥಾ ಸ್ಪರ್ಧೆಯಲ್ಲಿ ಕತೆ `ಅವಸ್ಥೆ’ಗೆ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ, ಮಾಧ್ಯಮ ಪ್ರಶಸ್ತಿ, ಕುವೆಂಪು ಸಾಹಿತ್ಯ ಪುರಸ್ಕಾರ, ಪಾಪು ಪುರಸ್ಕಾರ, ಹೈದ್ರಾಬಾದ್ ಕರ್ನಾಟಕ ಯುವ ಪತ್ರಕರ್ತ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.

ಮಹಿಪಾಲರೆಡ್ಡಿ ಮುನ್ನೂರು

(18 Nov 1971)