About the Author

ಜಾನಪದ ತಜ್ಞ ಮಲ್ಲಿಕಾರ್ಜುನ ಲಠ್ಠೆ ಅವರು 1932 ಏಪ್ರಿಲ್ 12ರಂದು ಬೆಳಗಾವಿ ಜಿಲ್ಲೆಯ ಮುತನಾಳದಲ್ಲಿ ಜನಿಸಿದರು. ತಂದೆ ಶಿವಪ್ಪ, ತಾಯಿ ಬಸವಮ್ಮ. ಬಿ.ಎ. ಆನರ್ಸ್‌ ಪದವಿ ಮತ್ತು ಸ್ನಾತಕೋತ್ತರ ಪದವೀಧರರು. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವೀಧರರು. ಉಪಾಧ್ಯಾಯರಾಗಿ, ಅಧ್ಯಾಪಕರಾಗಿ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ವಿವಿಧ ಹುದ್ದೆ ಅಲಂಕರಿಸಿದ್ದರು.  ಅಕ್ಕಮಹಾದೇವಿ, ಬಿಜ್ಜ ಮಹಾದೇವಿ, ಹರಿಹರ ಕವಿಯ ರಗಳೆ, ಭೂಮರೆಡ್ಡಿ ಬಸಪ್ಪನವರು, ಶರಣಮಾದಾರ ಚನ್ನಯ್ಯ, ಶಿವಯೋಗಿ ಸಿದ್ಧರಾಮ, ಶರಣರ ಜೀವನ ದರ್ಶನ, ಕನ್ನಡ ಯಾತ್ರೆ, ಕರ್ಮಯೋಗಿ ಎಸ್.ಬಿ. ಪಾಟೀಲ, ಶರಣ ಮೇದಾರ ಕೇತಯ್ಯ ಹೀಗೆ  ಕೃತಿಗಳನ್ನು ರಚಿಸಿದ್ದಾರೆ. ‘ಜಾನಪದ ದೀಪ್ತಿ (ಭಾಗ 1-2)’ ಅವರ ಪ್ರಮುಖ ಕೃತಿ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಇಳಕಲ್ ಮಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. 1982ರಲ್ಲಿ ‘ಸಾಹಿತ್ಯ ಸಂತುಷ್ಟಿ’ ಅವರಿಗೆ ಅರ್ಪಿಸಿದ ಗೌರವ ಗ್ರಂಥ. ಅವರು 2007 ನವೆಂಬರ್‌ 19ರಂದು ನಿಧನರಾದರು.

ಮಲ್ಲಿಕಾರ್ಜುನ ಲಠ್ಠೆ

(12 Apr 1932-19 Nov 2007)