About the Author

ಮೀರಾ ಪಿ.ಆರ್- ಹುಟ್ಟಿದ್ದು ತಮ್ಮ ತಾಯಿಯ ತವರೂರಾದ ಗುಂಡ್ಲುಪೇಟೆಯಲ್ಲಿ. ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ತುಮಕೂರು ಮತ್ತು ಮೈಸೂರಿನಲ್ಲಿ. ಬೆಂಗಳೂರಿನಲ್ಲೂ ಒಂದು ವರ್ಷ ವಾಸವಿದ್ದು ನಂತರ ಅಮೆರಿಕಾದ ಬಾಸ್ಟನ್ ನಲ್ಲಿ 8 ವರ್ಷಗಳನ್ನು ಕಳೆದು, 2008 ರಿಂದ ನ್ಯೂಜೆರ್ಸಿಯಲ್ಲಿ ನೆಲೆ ನಿಂತಿದ್ದಾರೆ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಮೀರಾ ಶಿಕ್ಷಕಿಯಾಗಿ ಹಾಗೂ ಮೈಸೂರು, ಬೆಂಗಳೂರು ಆಕಾಶವಾಣಿಯಲ್ಲಿ ಹಲವು ವರ್ಷ ಅರೆಕಾಲಿಕ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಮತ್ತು ವೆಬ್ ಪೋರ್ಟಲ್ ಗಳಲ್ಲಿ, ಕನ್ನಡ ಸಾಹಿತ್ಯ ರಂಗ ಮತ್ತು ಅಮೆರಿಕದ ಕನ್ನಡ ಕೂಟಗಳ ಹಲವು ಪ್ರಕಟಣೆಗಳಲ್ಲಿ ಇವರ ಹಲವು ಕಥೆ, ಕವಿತೆ, ಪ್ರಬಂಧ, ವಿಮರ್ಶೆ, ಅಂಕಣ ಬರಹಗಳು ಪ್ರಕಟವಾಗಿವೆ. ಮಕ್ಕಳ ಸಾಹಿತ್ಯ ಇವರ ವಿಶೇಷ ಪ್ರೀತಿ.  ಅಕ್ಕ 2010ರ ಅಂಗವಾಗಿ ಪ್ರಕಟಗೊಂಡ ಮಕ್ಕಳ ವಿಶೇಷ ಸಂಚಿಕೆ ಗುಬ್ಬಿಗೂಡು ಪುಸ್ತಕದ ರೂವಾರಿ, ಅಕ್ಕ 2012 ಸಮ್ಮೇಳನದ ಅಂಗವಾಗಿ ಹೊರಬಂದ ಜಗಲಿ ವಾರ್ತಾಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಮತ್ತು ಕನ್ನಡ ಸಾಹಿತ್ಯ ರಂಗದ ಪುಸ್ತಕ ಮಾಲೆ-7ರ ಪ್ರಕಟಣೆೆಗಳಾದ ಅನುವಾದ ಸಂವಾದ ಮತ್ತು A little taste of kannada in english ಕೃತಿಗಳ ಸಂಪಾದಕ ಮಂಡಳಿಯಲ್ಲಿಯೂ ಕೆಲಸ ಮಾಡಿದ್ದಾರೆ. 

ನ್ಯೂಜೆರ್ಸಿಯಲ್ಲಿ ತಮ್ಮದೇ ಸಂಗೀತ ಶಾಲೆಯೊಂದನ್ನು ನಡೆಸುತ್ತಿರುವ ಮೀರಾ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಸಿನಿಮಾ, ವೆಬ್ ಮತ್ತು ಗ್ರಾಫಿಕ್ ಡಿಸೈನಿಂಗ್ ಹೀಗೆ ಹತ್ತು ಹಲವು ಆಸಕ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಿಂದ ಅಮೆರಿಕಾಗೆ 2000ದಲ್ಲಿ ತೆರಳಿದ ಇವರು,  ಸಧ್ಯಕ್ಕೆ ನ್ಯೂಜೆರ್ಸಿಯ ಎಡಿಸನ್ ಎಂಬಲ್ಲಿ ತಮ್ಮ ಪತಿ ಭಾರ್ಗವ ಹಾಗೂ ಮಗ ನಿಶಾಂತನ ಜೊತೆ ನೆಲೆಸಿದ್ದಾರೆ. 

ಮೀರಾ ಪಿ.ಆರ್‌.

Books by Author