About the Author

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಂಡಗದ್ದೆಯಲ್ಲಿ ಲೇಖಕ ಎನ್. ಪ್ರಹ್ಲಾದರಾವ್ ಹುಟ್ಟಿದರು. ತಂದೆ- ಹನುಮಂತರಾವ್, ತಾಯಿ- ತುಳಜಾಬಾಯಿ. ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ. ಮೈಸೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಮೈಸೂರು ಯುವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜುಗಳಲ್ಲಿ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಮೈಸೂರು ವಿ.ವಿ.ದ ಕನ್ನಡ ‘ವಿಶ್ವಕೋಶ’ದ ಸಂಯೋಜಕ ಸಂಪಾದಕರಾಗಿದ್ದರು. 

ಪ್ರಬಂಧಗಳು : ರಥ-ರಥಿಕ, ಮಧುವ್ರತ , ಮುತ್ತಿನ ಹಾರ, ಲೇಖನ ಕಲೆ- ಮಧುವ್ರತ ಪ್ರಬಂಧ ಸಂಕಲನವು ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ., ಬಿ.ಎಸ್ಸಿ., ತರಗತಿಗಳಿಗೆ ಪಠ್ಯಪುಸ್ತಕವಾಗಿತ್ತು. ಈ ಕೃತಿಯು ಹಿಂದಿಗೂ ಅನುವಾದಗೊಂಡಿದೆ. ಮುತ್ತಿನ ಹಾರ ಪ್ರಬಂಧ ಸಂಕಲನವು ಮೈಸೂರು ವಿಶ್ವವಿದ್ಯಾಲಯದ ಪಠ್ಯವಾಗಿತ್ತು. ಕೃತಿಗಳು: ಮಿಂಚುಳ್ಳಿ, ಕ್ರಿಸ್ಟೋಫರ್ ಕೊಲಂಬಸ್ ಮತ್ತು ಪಿನೋಕಿಯೋ (ಅನುವಾದ). ಶಿಶುಸಾಹಿತ್ಯದ ಪಿನೋಕಿಯೋ ಕೃತಿಯು ಜಗತ್ತಿನ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದೆ. ಕೊಲಂಬಸ್‌ನ ಮೊದಲ ಯಾನದ ಮಹಾ ಸಾಹಸವನ್ನು ತಿಳಿಸುವ ಕೃತಿ ‘ಮಹಾಯಾನ’. 198 ವಚನಗಳ ಸಂಗ್ರಹ ಅಮಲಿನ ವಚನಗಳು, ರಾಜಬೆಸ್ತ, ಮೈಸೂರ್ ಪಾಕ್, ಸಾಕುತಾಯಿ ಪರಪುಟ್ಟ, ಸ್ಮೃತಿಕನ್ಯೆ (ಕವನ ಸಂಕಲನ), ಅವತಾರ ಕಥಾ ಸಂಕಲನಗಳು. ಪ್ರೊ. ಕೆ. ವೆಂಕಟರಾಮಪ್ಪನವರೊಂದಿಗೆ ಕುಮಾರವ್ಯಾಸ ಭಾರತದ ವಿರಾಟಪರ್ವ ಮತ್ತು ಸಭಾಪರ್ವಗಳ ಗದ್ಯಾನುವಾದವನ್ನು ‘ಮತ್ಸ್ಯನಗರಿ’, ‘ರಾಜಸೂಯ’ ಎಂದು ಪ್ರಕಟಸಿದ್ದಾರೆ. ಐ.ಬಿ. ಎಚ್. ಪ್ರಕಾಶನಕ್ಕಾಗಿ ‘ಇದು ನಮ್ಮ ಭಾರತ’ ಮಾಲಿಕೆಗಾಗಿ 5 ಸಂಪುಟಗಳನ್ನು ಅನುವಾದಿಸಿದ್ದಾರೆ.  ಮಿಂಚುಳ್ಳಿ ಮಕ್ಕಳ ಪದ್ಯಗಳ ಸಂಕಲನಕ್ಕೆ 1962ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನ, ಎಂ. ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (1979) ಶಿಶು ಸಾಹಿತ್ಯ ಗೋಷ್ಠಿಯಲ್ಲಿ ಗೌರವ ಲಭಿಸಿತ್ತು. 1980ರ ಮಾರ್ಚ್ 18ರಂದು ನಿಧನರಾದರು. 

ಎನ್. ಪ್ರಹ್ಲಾದರಾವ್

(10 Jun 1920-18 Mar 1980)