About the Author

ಎನ್. ಆರ್. ರೂಪಶ್ರೀ ಅವರು 1980ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನಿಸಿದರು. ಶಿರಸಿಯ ಎಮ್.ಎಮ್.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿಶ್ವವಿದ್ಯಾನಿಲಯದ ಚಿನ್ನದ ಪದಕದೊಂದಿಗೆ ಪದವಿಗಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಅವರು ಪ್ರಸ್ತುತ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. 

ಫ್ರೌಢಶಾಲೆಯ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ರೂಪಶ್ರೀ ಅವರು 2006ರಲ್ಲಿ 'ಜ್ಞಾನ ಜ್ಯೋತಿ' ಆಧ್ಯಾತ್ಮಿಕ ಲೇಖನಗಳ ಸಂಕಲನವನ್ನು ಪ್ರಕಟಿಸಿದ್ದರು. 2008ರಲ್ಲಿ 'ಮೌನಕಾಲ' ಕವನ ಸಂಕಲನ ಪ್ರಕಟಿಸಿದ್ದರು. 2010ರಲ್ಲಿ 'ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು' ಕಥಾಸಂಕಲನ ಪ್ರಕಟಿಸಿದ್ದರು. 2012ರಲ್ಲಿ 'ಕನಸ ತುಂಬಿದ ಕವಿತೆ' ಕವನ ಸಂಕಲನ ಪ್ರಕಟಿಸಿದ್ದರು. 2015ರಲ್ಲಿ 'ಹೆಜ್ಜೆಯಲ್ಲಿ ಗೆಜ್ಜೆನಾದ' ಕಥಾ ಸಂಕಲನ ಪ್ರಕಟಗೊಂಡಿದೆ. 

ಉತ್ತರ ಕನ್ನಡ ಜಿಲ್ಲಾ 'ಭಕ್ತಿ ಸಾಹಿತ್ಯ ಪ್ರಶಸ್ತಿ', ಉಡುಪಿಯಿಂದ ಕೊಡಮಾಡುವ 'ಮಲ್ಲಿಗೆ ಮುಗುಳು ಸಾಹಿತ್ಯ ಪುರಸ್ಕಾರ', ಬೆಂಗಳೂರಿನ ಹವ್ಯಕ ಮಹಾಸಭಾದಿಂದ ಎರಡು ಬಾರಿ 'ವಿಶೇಷ ಸಾಧನೆಯ ಪ್ರಶಸ್ತಿ', ಕ್ರೈಸ್ಟ್ ಕಾಲೇಜು ದ.ರಾ.ಬೇಂದ್ರೆ ಸ್ಮೃತಿ ಕವನ ಸ್ಪರ್ಧೆ, ಸಂಚಯ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ, ಬೆಂಗಳೂರಿನ ಲೇಖಕಿಯರ ಪರಿಷತ್ತಿನ 'ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ' ಎರಡು ಬಾರಿ ದೊರೆತಿದೆ. ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ 'ಸಾಹಿತ್ಯ ಸಿಂಧು ಪ್ರಶಸ್ತಿ'. ಅಖಿಲ ಕರ್ನಾಟಕ ಸರ್ವಜನ ಮಹಿಳಾ ಹಿತರಕ್ಷಣಾ ವೇದಿಕೆಯ 'ಝೂನ್ಸಿ ಲಕ್ಷ್ಮೀಬಾಯಿ ಪ್ರಶಸ್ತಿ' , 2010ರ ಶಿರಸಿ ತಾಲೂಕು 'ರಾಜ್ಯೋತ್ಸವ ಪ್ರಶಸ್ತಿ' ಜೊತೆಗೆ ರಾಜ್ಯ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಇವರ ಕಥೆ, ಕವಿತೆ, ಲೇಖನಗಳು ಬಹುಮಾನ ಪಡೆದುಕೊಂಡಿವೆ. 

ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅಭಿಪ್ರಾಯ ಮಂಡನೆ, ಕವಿಗೋಷ್ಠಿಗಳಲ್ಲಿ ಕವನ ವಾಚನ, ಕಾರ್ಯಕ್ರಮದ ನಿರ್ವಹಣೆಲ್ಲಿಯೂ ರೂಪಶ್ರೀಯವರು ಜನಮನ್ನಣೆಗಳಿಸಿದ್ದಾರೆ. ಶ್ರೀಧರಪ್ರಭಾ, ನವಚಿಂತನ,  ಹೇಮಪುರ, ನಿಮ್ಮೆಲ್ಲರ ಮಾನಸ, ಅನುಸಂಧಾನ, ಧ್ಯೇಯನಿಷ್ಠ ಪತ್ರಕರ್ತ, ಲೋಕಧ್ವನಿ, ವಿಜಯ ಕರ್ನಾಟಕ, ಹೊಸತು, ಪ್ರಜಾನುಡಿ, ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕರ್ಮವೀರ, ಮಯೂರ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿ ಕೇಂದ್ರಗಳಿಂದ ಕಥೆ ಕವನಗಳು ಪ್ರಸಾರಗೊಂಡಿವೆ. 

ಎನ್. ಆರ್. ರೂಪಶ್ರೀ