About the Author

’ವಿಶ್ವರೂಪ’ ಎಂಬ ಕಾವ್ಯನಾಮದಿಂದ ಬರೆಯುವ ಎನ್‌. ವಿಶ್ವರೂಪಾಚಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರದವರು. ತಂದೆ ಸಿ.ಎಂ. ನಂಜುಂಡಾಚಾರ್ ಮತ್ತು ತಾಯಿ ಲಿಂಗಮ್ಮ.  ಆರಂಭಿಕ ಶಿಕ್ಷಣವನ್ನು ವಿಜಯಪುರ ಹಾಗೂ ರಾಮನಗರಗಳಲ್ಲಿ ಪಡೆದ ಅವರು  ಮೈಸೂರು ಐ.ವಿ. ಸಂಜೆ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೆಲ್ತ್‌ ಸೂಪರ್‌ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 34 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ 13 ವರ್ಷ ಜನಾರೋಗ್ಯ ಬೋಧಕರಾಗಿ ಕೆಲಸ ಮಾಡಿರುವ ಅವರು ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಬರವಣಿಗೆ ಆರಂಭಿಸಿದರು. ಮಕ್ಕಳ ಕಥೆ, ಕವನ, ಲೇಖನ ಬರೆಯುವ ಮೂಲಕ ಬರವಣಿಗೆ ಆರಂಭಿಸಿದ ಅವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.

ವೈದ್ಯಕೀಯ- ವೈಚಾರಿಕ ವಿಷಯಗಳ ಕುರಿತು ಪುಸ್ತಕ ಬರೆದಿರುವ ಅವರು ಪತ್ರಿಕಾ ಸಂಗ್ರಹ, ಲೈಂಗಿಕ ಆರೋಗ್ಯ ಶಿಕ್ಷಣ ನೀಡುವುದು ಅವರ ಹವ್ಯಾಸ. ’ಆರೋಗ್ಯ ಅನುರಾಗ' ಮಾಸಿಕ ಸಂಪಾದಕರಾಗಿರುವ ಅವರು 'ಸೃಜನಶೀಲ ವಿಶ್ವಕರ್ಮ' ಪಕ್ಷ ಪತ್ರಿಕೆಯ ಸಂಪಾದಕರು ಕೂಡ. ಅವರ ನೂರಕ್ಕೂ ಹೆಚ್ಚು ಕೃತಿ ಪ್ರಕಟವಾಗಿವೆ. ಲೈಂಗಿಕಜ್ಞಾನ ವಿಜ್ಞಾನ, ನಿಮ್ಮ ದಾಂಪತ್ಯ ಜೀವನ, ನಿಮ್ಮ ಪರಿಸರ ನಿಮ್ಮ ಆರೋಗ್ಯಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಎನ್. ವಿಶ್ವರೂಪಾಚಾರ್

(05 Aug 1948)